8 ಪೊಲೀಸರನ್ನು ಹತ್ಯೆಗೈದಿದ್ದ ವಿಕಾಸ್ ದುಬೆ ಸೆರೆಸಿಕ್ಕಿದ್ದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್,ಜು.9- ಉತ್ತರಪ್ರದೇಶವನ್ನೇ ಬೆಚ್ಚಿ ಬೀಳಿಸಿದ್ದ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ ಕುಖ್ಯಾತ ಪಾತಕಿ ವಿಕಾಸ್ ದುಬೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಧ್ಯಪ್ರದೇಶದ ಉಜ್ಜೇನ್‍ನಲ್ಲಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಡರಾತ್ರಿ ಇಲ್ಲಿನ ರಹಸ್ಯ ಸ್ಥಳದಲ್ಲಿ ಅಡಗಿ ಕುಳಿತಿದ್ದ ವಿಜಯ್ ದುಬೈಯನ್ನು ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿದ ಉತ್ತರಪ್ರದೇಶ ಹಾಗೂ ಮದ್ಯಪ್ರದೇಶದ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಖೆಡ್ಡಾಕ್ಕೆ ಬಿದ್ದಿದ್ದಾನೆ.

ಕಳೆದ ವಾರ ಕಾನ್ಪುರದ ಚೌಬಿಯಾರ್ ಎಂಬ ಪ್ರದೇಶದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ್ದ ವಿಕಾಸ್ ದುಬೆ ಹಾಗೂ ಆತನ ಸಹಚರರು ಓರ್ವ ಡಿವೈಎಸ್‍ಪಿ ಸೇರಿದಂತೆ ಎಂಟು ಮಂದಿ ಪೊಲೀಸರನ್ನು ಬರ್ಭರವಾಗಿ ಹತ್ಯೆಗೈದಿದ್ದ.

ಈ ಪ್ರಕರಣ ಉತ್ತರಪ್ರದೇಶದಲ್ಲಿ ಭಾರೀ ತಲ್ಲಣ ಸೃಷ್ಟಿಸಿತ್ತು. ನಿನ್ನೆಯಷ್ಟೇ ವಿಶೇಷ ಕಾರ್ಯಾಚರಣೆ ಪಡೆಯ ಪೊಲೀಸರು ನಡೆಸಿದ ಎನ್‍ಕೌಂಟರ್‍ನಲ್ಲಿ ವಿಕಾಸ್ ದುಬೆ ಆಪ್ತ ಅನಿಲ್ ದುಬೆಯನ್ನು ಹತ್ಯೆ ಮಾಡಿದ್ದರು.

ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜವ ತೆರಳಿದಾಗ ಮೊದಲ ಎನ್‍ಕೌಂಟರ್ ನಡೆದಿತ್ತು.

ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು. ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್‍ಗಳು ಗುಂಡಿನ ಮಳೆಗೆರೆದಿದ್ದಾರೆ.

ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.

ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.

# ಅಳಿಯನ ಎನ್‍ಕೌಂಟರ್:

ವಿಕಾಸ್ ದುಬೆ ಗ್ಯಾಂಗ್‍ನ ಬೇಟೆ ಮುಂದುವರಿಸಿರುವ ಪೊಲೀಸರು ಆರು ಗಂಟೆಗಳಲ್ಲಿ ಎರಡನೇ ಎನ್‍ಕೌಂಟರ್ ನಡೆಸಿ ವಿಕಾಸ್ ದುಬೆನ ಅಳಿಯನನ್ನು ಕೊಂದಿದ್ದಾರೆ.  ವಿಕಾಸ್ ದುಬೆಯ ಸಹಚರ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿ ಹುದುಗಿಸಿ ಇಟ್ಟಿರುವ ಶಸ್ತ್ರಾಸ್ತ್ರಗಳ ಶೋಧ ಕಾರ್ಯಾಚರಣೆ ವೇಳೆ ಪೊಲೀಸರತ್ತ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಹಚರರನ್ನು ಬಂಧಿಸಲಾಗಿದೆ.

ಬಳಿಕ ದುಬೆಯ ಭಾವ ಹಾಗೂ ಬಾಲ್ಯಸ್ನೇಹಿತ ರಾಜು ಖುಲ್ಲಾರ್ ಅಲಿಯಾಸ್ ಗಜೇಂದ್ರ ಎಂಬಾತನನ್ನು ಮಧ್ಯಪ್ರದೇಶದ ಶಾಧೋಲ್‍ನಲ್ಲಿ ಎಸ್‍ಟಿಎಫ್ ತಂಡ ಸೆರೆ ಹಿಡಿದಿದೆ. ಖುಲ್ಲಾರ್‍ನ ಮಗ ಆದರ್ಶನನ್ನು ಒಂದು ದಿನ ಮುಂಚೆಯೇ ಸೆರೆ ಹಿಡಿಯಲಾಗಿತ್ತಾದರೂ, ತಂದೆಯ ಬಂಧನದವರೆಗೆ ಇದನ್ನು ಬಹಿರಂಗವಾಗಿಡಲಾಗಿತ್ತು.

ವಿಕಾಸ್ ದುಬೆಯ ಅಳಿಯ ಹಾಗೂ ಅಂಗರಕ್ಷಕನಾಗಿದ್ದ ಅಮರ್ ದುಬೆಯನ್ನು ಮಧ್ಯಪ್ರದೇಶ ಗಡಿಯ ಹಮೀರ್ಪುರದಲ್ಲಿ ನಡೆದ ಶೂಟೌಟ್‍ನಲ್ಲಿ ಹತ್ಯೆ ಮಾಡಲಾಗಿದೆ.  ರಿಫರೀದಾಬಾದ್‍ಲ್ಲಿ ಮಂಗಳವಾರ ರಾತ್ರಿ ವಿಕಾಸ್ ದುಬೆ ಗ್ಯಾಂಗ್‍ನ ಮೂವರನ್ನು ಸೆರೆ ಹಿಡಿಯಲಾಗಿದ್ದು, ಅವರು ನೀಡಿದ ಸುಳಿವಿನ ಆಧಾರದಲ್ಲಿ ಅಮರ್ನ ಇರುವಿಕೆಯನ್ನು ಪೊಲೀಸರು ಪತ್ತೆ ಮಾಡಿದ್ದರು.

ಅಮರ್ ದುಬೆ ಕೇವಲ ಒಂಬತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ. ಪೊಲೀಸರ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಗುಂಡಿಕ್ಕಿ ಕೊಲ್ಲಲು ಆತನ ಪತ್ನಿಯ ಮನೆಯವರು ಒಪ್ಪಿಗೆ ನೀಡಿದ್ದರು. ಅಮರ್ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಅಮರ್ ಹಾಗೂ 14 ಮಂದಿ ಸಹಚರರ ಭಾವಚಿತ್ರಗಳ ಪೋರ್‍ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದರು.

Facebook Comments