ಕುಖ್ಯಾತ ಕ್ರಿಮಿನಲ್ ದುಬೇ ಸಹಚರ ಸೆರೆ, ಮನೆಯ ಬಂಕರ್‌ನಲ್ಲಿ ಭಾರೀ ಸ್ಫೋಟಕ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ/ಕಾನ್ಪುರ, ಜು.6- ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿವೈಎಸ್‍ಪಿ ಸೇರಿದಂತೆ ಎಂಟು ಪೊಲೀಸರ ಮಾರಣಹೋಮ ನಡೆಸಿದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೇ ಮತ್ತು ಅತನ ಸಹಚರರ ಸೆರೆ ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ದುಬೇ ಪರಮಾಪ್ತ ಸಹಚರ ಮತ್ತು ಶಾರ್ಪ್ ಶೂಟರ್ ದಯಾ ಶಂಕರ್ ಆಗ್ನಿಹೋತ್ರಿಯನ್ನು ಕಾನ್ಪುರ್ ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.

ಪೊಲೀಸರ ಮಾರಣಹೋಮದಲ್ಲಿ ಈ ಮೂವರು ಪೊಲೀಸರನ್ನು ಕೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹತ್ಯಾಕಾಂಡದಲ್ಲಿ ಹೆಸರಿಲ್ಪಟ್ಟ 16 ಮಂದಿಯಲ್ಲಿ ಈತನ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಕೊಲೆ, ದರೋಡೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಾಮೀಲಾಗಿರುವ ಕುಪ್ರಸಿದ್ಧ ಅಪರಾಧಿ ದುಬೇ ಕಾನ್ಪುರದ ಬಿತೂರ್ ಪ್ರದೇಶದಲ್ಲಿರುವ ತನ್ನ ಮನೆ ಬಂಕರ್ (ರಹಸ್ಯ ಅಡಗುದಾಣ) ಹೊಂದಿದ್ದು, ಅಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ ಸಂಗತಿ ಪರಿಶೀಲನೆ ವೇಳೆ ಪೊಲೀಸರಿಗೆ ಕಂಡುಬಂದಿದೆ.

ನಕ್ಸಲರ ಶೈಲಿಯಲ್ಲಿ ಈ ಕ್ರಿಮಿನಲ್‍ಗಳು ಅಕ್ರಮ ಶಸ್ತ್ರಾಸ್ತ್ರಗಳು, ಬಾಂಬ್‍ಗಳು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿ, ಮಾವೋವಾದಿಗಳ ರೀತಿಯಲ್ಲೇ ಪೊಲೀಸರ ಮಾರಣಹೋಮ ನಡೆಸಿದ್ದಾರೆ.

ದುಬೇಯನ್ನು ಸೆರೆ ಹಿಡಿಯಲು ಹೋದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‍ಪಿ), ಮೂವರು ಸಬ್ ಇನ್ಸ್‍ಪೆಕ್ಟರ್‍ಗಳೂ ಸೇರಿದಂತೆ ಎಂಟು ಪೊಲೀಸರನ್ನು ಕ್ರಿಮಿನಲ್‍ಗಳು ಗುಂಡಿಟ್ಟು ಕೊಂದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿತ್ತು.

ಈ ಭೀಕರ ಎನ್‍ಕೌಂಟರ್‍ನಲ್ಲಿ ಏಳು ಪೊಲೀಸರಿಗೆ ತೀವ್ರ ಗಾಯಗೊಂಡಿದ್ದರು.  ಈ ಭೀಕರ ದಾಳಿ ಮತ್ತು ಎನ್‍ಕೌಂಟರ್‍ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‍ಪಿ) ದೇವೇಂದ್ರ ಕುಮಾರ್ ಮಿಶ್ರಾ, ಸಬ್ ಇನ್ಸ್‍ಪೆಕ್ಟರ್‍ಗಳಾದ ಮಹೇಶ್ ಯಾದವ್, ಅನೂಪ್ ಕುಮಾರ್ (ಚೌಕಿ ಉಸ್ತುವಾರಿ) ಮತ್ತು ನೆಬುಲಾಲ್ ಹಾಗೂ ಪೇದೆಗಳಾದ ಸುಲ್ತಾನ್ ಸಿಂಗ್, ರಾಹುಲ್ ಜಿತೇಂದ್ರ, ಮತ್ತು ಬಬ್ಲು ಹುತಾತ್ಮರಾದರು. ಈ ಕ್ರಿಮಿನಲ್ ಗ್ಯಾಂಗ್‍ಅನ್ನು ಬಂಧಿಸಲು 25 ವಿಶೇಷ ತಂಡಗಳನ್ನು ರಚಿಸಲಾಗಿದೆ.

Facebook Comments