ವಿಕ್ರಮ್ ಲ್ಯಾಂಡರ್ ಪತನ ಸ್ಥಳ ಪತ್ತೆಗೆ ನೇರವಾದ ಸುಬ್ರಹ್ಮಣ್ಯಂ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3- ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಕೊನೆಗೂ ನಿಖರವಾಗಿ ಪತ್ತೆ ಮಾಡಲು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಗೆ ಚೆನ್ನೈನ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣ್ಯಂ ನೆರವಾಗಿದ್ದಾರೆ.

ನಾಸಾದ ಲೂರ್ನಾ ರೆಕನೈಸನ್ಸ್ ಆರ್ಬಿಟರ್ (ಎಲ್‍ಆರ್‍ಒ) ಮೂಲಕ ತೆಗೆದ ಚಿತ್ರವೊಂದನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳ ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡ ರಾಶಿಗಳ ಕ್ಷೇತ್ರಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಅಲ್ಲದೆ, ಲ್ಯಾಂಡರ್‍ನ ಭಾಗಗಳು ಹಲವಾರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಲವು ಸ್ಥಳಗಳಲ್ಲಿ ಹರಡಿಕೊಂಡಿರುವುದು ತಿಳಿದು ಬಂದಿದೆ.

ಸೆ.26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡಿದ್ದ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಚೆನ್ನೈನ ಎಂಜಿನಿಯರ್ ಮತ್ತು ಬ್ಲಾಗರ್ ಷಣ್ಮುಗ ಸುಬ್ರಮಣ್ಯಂ ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಕಿ.ಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್‍ನ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿತ್ತು.

3.84 ಲಕ್ಷ ಕಿ.ಮೀ. ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಸ್ಥಳ ತಲುಪದೆ ಪಥದಲ್ಲಿಯೇ ಸಾಗುತ್ತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಭಾರೀ ಹರ್ಷದಲ್ಲಿದ್ದರು. ಸೆ.7ರ ಬೆಳಗಿನ ಜಾವ 1.50ರ ವೇಳೆಗೆ ಚಂದ್ರನ ದಕ್ಷಿಣ ಧೃವದಿಂದ 2.1 ಕಿ.ಮೀ.

ಎತ್ತರದಲ್ಲಿದ್ದಾಗ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಇದು ಇಡೀ ವಿಶ್ವವೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2 ಕನಸು ಭಗ್ನಗೊಳ್ಳುವಂತಾಗಿತ್ತು. ಈ ಮೂಲಕ ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲಗೊಂಡಿತ್ತು.

ಚಂದ್ರನ ದಕ್ಷಿಣ ಧೃವದಿಂದ ಸುಮಾರು 600 ಕಿಮೀ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡು ಅಪ್ಪಳಿಸಿರಬಹುದು ಎಂದು ಅಂದಾಜಿಸಲಾಗಿತ್ತು. ನಾಸಾ ಈಗ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಪತ್ತೆ ಮಾಡಿದೆ.  ಈ ಕಾರ್ಯದಲ್ಲಿ ನೆರವಾದ ಎಂಜಿನಿಯರ್ ಸುಬ್ರಹ್ಮಣ್ಯಂ ಅವರಿಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದ್ದು , ಲ್ಯಾಂಡರ್ ಪತನದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲು ನೆರವಾಗಿದೆ.

Facebook Comments