ಅಮೇರಿಕಾದ ನಾಸಾ ಕಣ್ಣಿಗೂ ಬೀಳದ ವಿಕ್ರಮ್ ಲ್ಯಾಂಡರ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.23 (ಪಿಟಿಐ)- ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ಯಶಸ್ಸಿನ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ವಿಕ್ರಮ್ ಲ್ಯಾಂಡರ್‍ನ ಜಾಡು ಪತ್ತೆಯಾಗಿಲ್ಲ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ತಿಳಿಸಿದೆ.

ಚಂದಿರನ ಪ್ರದೇಶದಲ್ಲಿ ನಾಸಾದ ಮೂನ್ ಆರ್ಬಿಟರ್ ಇತ್ತೀಚೆಗೆ ನಡೆದ ಹಾರಾಟ ಕಾರ್ಯಾಚರಣೆ ವೇಳೆ ಸೆರೆಹಿಡಿದ ದೃಶ್ಯಗಳಲ್ಲಿ ವಿಕ್ರಮ್ ಲ್ಯಾಂಡರ್‍ನ ಜಾಡು ಅಥವಾ ಅದು ಯಾವ ಸ್ಥಳದಿಂದ ನಾಪತ್ತೆಯಾಯಿತು ಎಂಬ ಬಗ್ಗೆ ಕುರುಹು ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ.

ವಿಕ್ರಂ ಲ್ಯಾಂಡರ್ ಶಶಾಂಕನ ಮೇಲ್ಮೈ ಮೇಲೆ ಭೂಸ್ಪರ್ಶ ಮಾಡಿದ ಸ್ಥಳದಲ್ಲಿ ಅಕ್ಟೋಬರ್ 14ರಂದು ನಾಸಾದ ಮೂನ್ ಆರ್ಬಿಟರ್ ಮತ್ತೊಮ್ಮೆ ಸೂಕ್ಷ್ಮ ಹಾರಾಟ ನಡೆಸಿ ಆ ಪ್ರದೇಶವನ್ನು ತನ್ನ ಹೈ ರೆಸೆಲ್ಯೂಷನ್ ಕ್ಯಾಮೆರಾದಿಂದ ಜಾಲಾಡಿತು. ಆದರೆ ಲ್ಯಾಂಡರ್‍ನ ಜಾಡು ಅಥವಾ ಅದು ಸಂಪರ್ಕ ಕಡಿತಗೊಳ್ಳುವುದಕ್ಕೆ ಮುನ್ನ ಸಾಗಿದ ಜಾಡಿನ ಬಗ್ಗೆ ಯಾವುದೇ ಖಚಿತ ಮಾಹಿತಿ ಪತ್ತೆಯಾಗಿಲ್ಲ ಎಂದು ಚಂದ್ರನ ಎಲ್‍ಆರ್‍ಓ ಮಿಷನ್‍ನ ಯೋಜನಾ ವಿಜ್ಞಾನಿ ನೋಹ್ ಎಡ್ವರ್ಡ್ ಪೆಟ್ರೋ ವಾರ್ತಾಸಂಸ್ಥೆಯೊಂದಕ್ಕೆ ವಿಶೇಷ ಇ-ಮೇಲ್ ಸಂವಾದದಲ್ಲಿ ತಿಳಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಸೆಪ್ಟೆಂಬರ್ 7ರಂದು ಚಂದಿರನ ಮೇಲೆ ವಿಕ್ರಮ್ ಲ್ಯಾಂಡರ್‍ನನ್ನು ಹಗುರವಾಗಿ ಇಳಿಸಲು ಯತ್ನಿಸಿತಾದರೂ, ಕೊನೆ ಕ್ಷಣದಲ್ಲಿ ಅದು ರಭಸವಾಗಿ ಮೇಲ್ಮೈಗೆ ಅಪ್ಪಳಿಸಿ ಸಂಪರ್ಕ ಕಡಿದುಕೊಂಡಿತ್ತು. ಅದನ್ನು ಪತ್ತೆ ಮಾಡಲು ನಿರಂತರ ಯತ್ನದ ಬಳಿಕ ಅದು ಅಪ್ಪಳಿಸಿದ ರಭಸಕ್ಕೆ ಆ ಪ್ರದೇಶದಲ್ಲಿ ಹಳ್ಳಗಳು ಆಗಿರುವ ಚಿತ್ರಗಳು ಲಭಿಸಿದ್ದವು. ಆನಂತರ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಪತ್ತೆ ಮಾಡಲು ನಡೆದ ಸತತ ಕಾರ್ಯಾಚರಣೆ ವಿಫಲವಾಗಿದೆ.

Facebook Comments