ಟೆರೆಸ್‍ನಲ್ಲೇ ಗಾಂಜಾ ಬೆಳೆದು ಮಾರಾಟ : ಇರಾನ್ ಪ್ರಜೆಗಳು ಸೇರಿ ನಾಲ್ವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.28- ಡಾರ್ಕ್‍ವೆಬ್‍ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಂಡು ವಿಲ್ಲಾದ ಟೆರೆಸ್‍ನಲ್ಲಿ ವೈಜ್ಞಾನಿಕವಾಗಿ ಹೈಡ್ರೋ ಗಾಂಜಾ ಬೆಳೆದು ಒಣಗಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಇರಾನ್ ದೇಶದ ಡ್ರಗ್‍ಪೆಡ್ಲರ್‍ಗಳು ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ಒಂದು ಕೋಟಿ ಬೆಲೆಯ ಹೈಡ್ರೋ ಗಾಂಜಾ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ದೇವರಜೀವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿ ನಗರದ ಎ ಬ್ಲಾಕ್‍ನ 2ನೇ ಕ್ರಾಸ್ ರಸ್ತೆಯಲ್ಲಿ ನಾಲ್ವರು ಬಿಳಿ ಬಣ್ಣದ ಸ್ಕೋಡಾ ಕಾರಿನಲ್ಲಿ ಬಂದು ಮಾದಕ ವಸ್ತು ಎಲ್‍ಎಸ್‍ಡಿ ಪೇಪರ್ಸ್ ಮತ್ತು ಹೈಡ್ರೋ ಗಾಂಜಾ ಹಾಗೂ ಗಾಂಜಾ ಇಟ್ಟುಕೊಂಡು ಪರಿಚಿತ ಗಿರಾಕಿಗಳಿಗೆ, ಸ್ನೇಹಿತರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ-ಬಿಟಿ ಉದ್ಯೊಗಿಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಸ್ಥಳಕ್ಕೆ ದಾವಿಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಬಂಧಿಸಿ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆಗೊಳಪಡಿಸಿದಾಗ ವಿಲ್ಲಾದಲ್ಲಿ ಹೈಡ್ರೋಗಾಂಜಾ ಬೆಳೆಸಿರುವುದಾಗಿ ಬಾಯ್ಬಿಟ್ಟಿದ್ದಾರೆ.

ವೀಸಾ ಅವ ಮುಗಿದಿದ್ದರೂ ತಮ್ಮ ದೇಶಕ್ಕೆ ಮರಳದೆ ಅನಕೃತವಾಗಿ ನಗರದಲ್ಲಿ ಬಿಡದಿ ಬಳಿಯ ವಿಲ್ಲಾ ಒಂದನ್ನು ಬಾಡಿಗೆಗೆ ಪಡೆದು ನೆಲೆಸಿದ್ದ ಡ್ರಗ್ಸ್‍ಪೆಡ್ಲರ್‍ಗಳು ಡಾರ್ಕ್‍ವೆಬ್‍ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಂಡು ಟೆರೆಸ್‍ನಲ್ಲಿ ವೈಜ್ಞಾನಿಕವಾಗಿ ಹೈಡ್ರೋಗಾಂಜಾ ಬೆಳೆದು ಒಣಗಿಸಿ ಮಾರಾಟ ಮಾಡಿ ಹಣಗಳಿಸುತ್ತಿದ್ದುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳಿಂದ ಒಂದು ಕೋಟಿ ಬೆಲೆಯ 130 ಹೈಡ್ರೋ ಗಾಂಜಾ ಗಿಡಗಳೂ ಸೇರಿದಂತೆ 12 ಕೆಜಿ 850 ಗ್ರಾಂ ಹೈಡ್ರೋ ಗಾಂಜಾ, ಎಲ್‍ಎಸ್‍ಪಿ ಸ್ಟ್ರಿಪ್ಸ್‍ಗಳು, ಸ್ಕೋಡಾ ಕಾರು, ಮೊಬೈಲ್, ಯುವಿಲೈಟ್ಸ್, ಎಲ್‍ಇಡಿ ಲ್ಯಾಂಪ್ಸ್, ತೂಕದ ಯಂತ್ರ ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಇರಾನ್ ಪ್ರಜೆ ವಿರುದ್ಧ ಈ ಹಿಂದೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ)ದ ಒಂದು ಪ್ರಕರಣ ಮತ್ತು ಯಶವಂತಪುರ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿ ಒಟ್ಟು 3 ಪ್ರಕರಣಗಳು ದಾಖಲಾಗಿವೆ.

Facebook Comments