ಬ್ರೇಕಿಂಗ್ : ವಿನಯ್ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ನ.9- ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ಕಾಂಗ್ರೆಸ್‍ನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನ್ಯಾಯಾಂಗ ಬಂಧನವನ್ನು ಇನ್ನೂ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಧಾರವಾಡದ ಮೂರನೇ ಸೆಷನ್ ನ್ಯಾಯಾಲಯದ ಎದುರು ಸಿಬಿಐ ಇಂದು ವಿನಯ್‍ಕುಲಕರ್ಣಿ ಅವರನ್ನು ಹಾಜರುಪಡಿಸಿತ್ತು. ಈ ಸಂದರ್ಭದಲ್ಲಿ ಮತ್ತಷ್ಟು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿತ್ತು.

ವಿನಯ್‍ಕುಲಕರ್ಣಿ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಜಾಮೀನು ಅರ್ಜಿಯನ್ನು ತಳ್ಳಿ ಹಾಕಿರುವ ಮೂರನೇ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಪಂಚಾಕ್ಷರಿ ಅವರು ವಿನಯ್ ಕುಲಕರ್ಣಿ ಅವರನ್ನು ನ.23ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ್‍ಗೌಡ ಅವರ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ.5ರಂದು ವಿನಯ್‍ಕುಲಕರ್ಣಿ ಅವರನ್ನು ಬಂಧಿಸಿತ್ತು. ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ನ.6ರಂದು ಪುರಸ್ಕರಿಸಿದ್ದ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿತ್ತು.

ಆ ಅವಧಿ ಇಂದು ಮುಕ್ತಾಯವಾಗಿದ್ದರಿಂದ ಬೆಳಗ್ಗೆ ಬಿಗಿ ಭದ್ರತೆಯಲ್ಲಿ ಕುಲಕರ್ಣಿ ಅವರನ್ನು ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿರುವುದರಿಂದ ದೀಪಾವಳಿಯನ್ನು ಕೂಡ ಜೈಲಿನಲ್ಲಿ ಕಳೆಯುವ ಪರಿಸ್ಥಿತಿ ವಿನಯ್‍ಕುಲಕರ್ಣಿ ಅವರಿಗೆ ಎದುರಾಗಿದೆ.

ನ.7ರಂದು ವಿನಯ್‍ಕುಲಕರ್ಣಿ ಅವರ ಹುಟ್ಟುಹಬ್ಬವಿತ್ತು. ಆ ದಿನ ಸಿಬಿಐ ವಶದಲ್ಲೇ ಅವರು ಹುಟ್ಟುಹಬ್ಬವನ್ನು ಕಳೆದರು. ಈಗ ದೀಪಾವಳಿಗೂ ಅದೇ ಗತಿಯಾಗಿದೆ. ಈ ನಡುವೆ ಜಾಮೀನಿಗಾಗಿ ವಕೀಲರು ಪ್ರಯತ್ನ ಮುಂದುವರೆಸಿದ್ದಾರೆ.

Facebook Comments