ಕೆಪಿಎಲ್ ಫಿಕ್ಸಿಂಗ್ ಸುಳಿಯಲ್ಲಿ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‍ಕುಮಾರ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ಕೆಪಿಎಲ್ ಫಿಕ್ಸಿಂಗ್ ಭೂತಕ್ಕೆ ಪ್ರತಿದಿನ ಒಬ್ಬೊಬ್ಬ ಆಟಗಾರ ಬಲಿಯಾಗುತ್ತತಿದ್ದು ಈಗ ಆ ಸುಳಿಗೆ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‍ಕುಮಾರ್ ಕೂಡ ಸಿಕ್ಕಿಬಿದ್ದಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಸುಳಿಗೆ ಮೊನ್ನೆಯಷ್ಟೇ ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಸಿಕ್ಕಿಬಿದ್ದಿದ್ದು ಅವರಿಗೆ ಸಿಬಿಐ ನೋಟೀಸ್ ಕೂಡ ಜಾರಿ ಮಾಡಿತ್ತು.

ಆ ಪ್ರಕರಣ ಮಾಸುವ ಮುನ್ನವೇ ಕೆಪಿಎಲ್‍ನ ಸ್ಪಾಟ್ ಫಿಕ್ಸಿಂಗ್ ಬಲೆಗೆ ಕರ್ನಾಟಕದ ಮಾಜಿ ನಾಯಕ ವಿನಯ್‍ಕುಮಾರ್ ಕೂಡ ಸಿಕ್ಕಿಬಿದ್ದಿದ್ದು ಸಿಬಿಐ ಅವರಿಗೆ ನೋಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗಬೇಕೆಂದು ಖಡಕ್ ಎಚ್ಚರಿಕೆ ನೀಡಿದೆ. ವಿನಯ್‍ಕುಮಾರ್ ಪ್ರಸಕ್ತ ಕೆಪಿಎಲ್‍ನಲ್ಲಿ ಹುಬ್ಳೆ ಟೈಗರ್ಸ್ ತಂಡದ ನಾಯಕನಾಗಿದ್ದು ತಮ್ಮ ವೇಗದ ಬೌಲಿಂಗ್‍ನಿಂದಲೇ ಹೆಸರಾಗಿದ್ದು, ಬುಕ್ಕಿಗಳು ಇವರನ್ನು ಸಂಪರ್ಕಿಸಿದ್ದರಾ ಎಂಬ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ವಿನಯ್‍ಕುಮಾರ್‍ಗೆ ಸಿಬಿಐ ನೋಟೀಸ್ ಜಾರಿ ಮಾಡಿದೆ.

ಭಾರತ ಎ, ಐಪಿಎಲ್‍ನಲ್ಲಿ ಆರ್‍ಸಿಬಿ, ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ವಿನಯ್‍ಕುಮಾರ್ 31 ಏಕದಿನ ಹಾಗೂ 9 ಟ್ವಿಂಟಿ-20 ಪಂದ್ಯಗಳನ್ನಾಡಿದ್ದು ಕ್ರಮವಾಗಿ 38 ಹಾಗೂ 10 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಫಿಕ್ಸಿಂಗ್ ಭೂತದ ಹಿನ್ನೆಲೆಯಲ್ಲ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್‍ರನ್ನು ಪೊಲೀಸರು ಬಂಧಿಸಿದ್ದರೆ, ಕರ್ನಾಟಕದ ಆಟಗಾರರಾದ ಕೆ.ಎಂ.ಗೌತಮ್, ಅಬ್ದುಲ್ ಖಾಜಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ,

ತಮಿಳುನಾಡು ಪ್ರಿಯರ್ ಲೀಗ್‍ನಲ್ಲೂ ಬೆಟ್ಟಿಂಗ್ ಭೂತ ತನ್ನ ಕದಂಬಬಾಹು ಚಾಚಿಕೊಂಡಿದೆಯೇ ಚಂದ್ರಶೇಖರ್ ಎಂಬ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಹೊರಬಂದಿದ್ದು, ಅಲ್ಲಿ ಇನ್ನೆಷ್ಟು ಆಟಗಾರರು ಸಿಕ್ಕಿಬೀಳುವಾರೋ ಎಂಬ ಅನುಮಾನಗಳು ದಟ್ಟವಾಗಿವೆ.

ಕೆಪಿಎಲ್ ಅಥವಾ ಕ್ರಿಕೆಟ್ ಬೆಟ್ಟಿಂಗ್ ಅಥವಾ ಫಿಕ್ಸಿಂಗ್‍ನಲ್ಲಿ ಎಷ್ಟೇ ಪ್ರಭಾವಿಗಳು ಪಾಲ್ಗೊಂಡಿದ್ದರೂ ಕೂಡ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments