ಟಿಎಂಸಿ ಜೊತೆ ಘರ್ಷಣೆಯಲ್ಲಿ 3 ಬಿಜೆಪಿ ಕಾರ್ಯಕರ್ತರಿಗೆ ಗುಂಡೇಟು..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತಾ, ಮೇ 21- ಲೋಕಸಭಾ ಚುನಾವಣೆಯ ಎಲ್ಲಾ ಏಳು ಹಂತಗಳ ಮತದಾನದ ವೇಳೆ ಗಲಭೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ನಿನ್ನೆ ರಾತ್ರಿ ಮತ್ತೆ ಘರ್ಷಣೆ ಭುಗಿಲೆದ್ದಿದೆ.

ಕೂಚ್ ಬೆಹರ್‍ನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಸಂಘರ್ಷ ನಡೆದಿದೆ. ಈ ಘರ್ಷಣೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರಿಗೆ ಗುಂಡೇಟು ತಗುಲಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಮತ್ತೊಬ್ಬ ಗಾಯಾಳು ನಾಪತ್ತೆಯಾಗಿದ್ಧಾನೆ.

ಈ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದ್ದು, ಕೆಲವು ವಾಹನಗಳು ಜಖಂಗೊಂಡಿವೆ. ಈ ಕೃತ್ಯದ ಹಿಂದೆ ಆಡಳಿತಾರೂಢ ಟಿಎಂಸಿ ನಾಯಕರ ಕೈವಾಡ ಇದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ಧಾರೆ.

ಲೋಕಸಭೆಗೆ ನಡೆದ ಎಲ್ಲಾ ಏಳು ಹಂತಗಳ ಚುನಾವಣೆ ವೇಳೆ ಪಶ್ಚಿಮ ಬಂಗಾಳದ ವಿವಿಧೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟಗಳು ನಡೆದಿದ್ದವು. ಎರಡೂ ಪಕ್ಷದ ಕಲೆ ಸಂಸದರೂ ಸೇರಿದಂತೆ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದರು.

ಕೊನೆ ಮತ್ತು ಏಳನೇ ಹಂತದ ಚುನಾವಣೆಗೆ ಕೋಲ್ಕತಾದಲ್ಲಿ ನಡೆದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರಿಂದ ಘರ್ಷಣೆಗೆ ಕಾರಣವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ಎರಡು ಬಣಗಳ ಉದ್ರಿಕ್ತ ಗುಂಪುಗಳಿಂದ ಅಗ್ನಿಸ್ಪರ್ಶ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಈಶ್ವರ ಚಂದ್ರ ವಿದ್ಯಾಸಾಗರ್ ಪ್ರತಿಮೆ ಧ್ವಂಸಗಳಂಥ ಅಹಿತಕರ ಘಟನೆಗಳು ನಡೆದಿದ್ದವು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin