ದೆಹಲಿ ಗಲಭೆಯಲ್ಲಿ ಮೃತಪಟ್ಟವರ ದೇಹಗಳಲ್ಲಿ ಗುಂಡೇಟಿನ ಗಾಯ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.26- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮತ್ತು ಪರ ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ ಮತ್ತು ಹಿಂಸಾಚಾರದಿಂದ ಮೃತಪಟ್ಟ ಬಹುತೇಕ ಶವಗಳಲ್ಲಿ ಗುಂಡೇಟಿನ ಗಾಯ ಇರುವುದು ಕಂಡುಬಂದಿದೆ. ಘರ್ಷಣೆ ವೇಳೆ ಹತರಾದ ಹೆಡ್‍ಕಾನ್‍ಸ್ಟೇಬಲ್ ರತನ್‍ಲಾಲ್ ಅವರ ಮೃತ ದೇಹದಲ್ಲೂ ಗುಂಡೇಟಿನ ಗಾಯವಾಗಿರುವುದು ಮರಣೋತ್ತರ ಪರೀಕ್ಷೆ ವೇಳೆ ಕಂಡು ಬಂದಿದೆ.

ಕಲ್ಲು ತೂರಾಟ, ಮಾರಕಾಸ್ತ್ರ ಮತ್ತು ಗನ್‍ಗಳನ್ನು ಹೊಂದಿದ್ದ ದುಷ್ಕರ್ಮಿಗಳು ದಾಂಧಲೆ, ಲೂಟಿ ಮತ್ತು ಹಿಂಸಾಚಾರದಲ್ಲಿ ತೊಡಗಿದ್ದು, ಗುಂಡೇಟಿನಿಂದಲೇ ಹಲವರು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಪ್ರತಿಭಟನೆ ವೇಳೆ ಉದ್ರಿಕ್ತ ಗುಂಪಿನ ದುಷ್ಕರ್ಮಿಗಳು ರಿವಲ್ವಾರ್, ಪಿಸ್ತೂಲ್ ಮತ್ತು ಗನ್‍ಗಳನ್ನು ಬಳಸಿರುವುದು ಆತಂಕಕಾರಿಯಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸಲು ನಿಷೇಧಾಜ್ಞೆ , ಆನಂತರ ಕಫ್ರ್ಯೂ ಜಾರಿಗೊಳಿಸಿದ್ದರೂ ಕೂಡ ಪರಿಸ್ಥಿತಿ ತಿಳಿಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, 35 ಅರೆ ಸೇನಾಪಡೆಯನ್ನು ಪರಿಸ್ಥಿತಿ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ. ಅಲ್ಲದೆ, ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಗಲಭೆ ನಿಯಂತ್ರಣ ದಳಗಳನ್ನು ಸಹ ಈಶಾನ್ಯ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಒಟ್ಟಾರೆ ದೆಹಲಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂದಿನ ಪರಿಸ್ಥಿತಿಯನ್ನು ಆಧರಿಸಿ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಗಳು ದಟ್ಟವಾಗಿವೆ.

Facebook Comments