ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ, ಹೇಗಿದೆ ಅಂತಿಮ ಹಂತದ ಸಿದ್ದತೆಗಳು..?
ನವದೆಹಲಿ,ಆ.4- ಶತಮಾನಗಳ ವಿವಾದ ಬಗೆಹರಿದು ಕಡೆಗೂ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯುವ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಿದ್ದತೆಗಳು ಬರದಿಂದ ಸಾಗಿವೆ.
ಭದ್ರತಾ ವ್ಯವಸ್ಥೆ, ಸ್ವಚ್ಛತೆ, ಪೂಜಾ ಕಾರ್ಯಗಳ ಅಂತಿಮ ಹಂತದ ಸಿದ್ದತೆ ನಡೆಯುತ್ತಿವೆ. ಕೊರೋನಾ ಹಿನ್ನಲೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ. ಆದರೆ ಗಣ್ಯರ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಅಯೋಧ್ಯಾ ನಗರಿಯಲ್ಲಿ ಸಡಗರ ಸಂಭ್ರಮಕ್ಕೇನೂ ಕೊರತೆ ಇಲ್ಲ.
ಹಳದಿ ನಗರಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಹಿನ್ನಲೆಯಲ್ಲಿ ಇಡೀ ಅಯೋಧ್ಯೆ ನಗರ ಹಳದಿಮಯವಾಗಿ ಬದಲಾಗುತ್ತಿದೆ. ಎಲ್ಲಾ ಗೋಡೆಗಳಿಗೂ ಹಳದಿ ಬಣ್ಣ ಬಳಿಯಲಾಗಿದೆ.
ನಡುವೆ ರಾಮನ ಕತೆ ಹೇಳುವ ಚಿತ್ರಗಳನ್ನು ಬಿಡಿಸಲಾಲಾಗಿದೆ. ಶುಭ ಕಾರ್ಯಕ್ರಮಗಳ ಸೂಚಕ ಎನ್ನುವ ಕಾರಣಕ್ಕೆ ಹಳದಿ ಬಣ್ಣ ಬಳಿಯಲಾಗಿದೆ. ನಾಳೆ ಹಳದಿ ಮನೆಗಳ ಮೇಲೆ ಕೇಸರಿ ಧ್ವಜ ರಾರಾಜಿಸಲಿದೆ.
ಕೊರೋನಾ ಹಿನ್ನಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ರಾಮಜನ್ಮಭೂಮಿ ಹೋರಾಟದಲ್ಲಿ ಸುದೀರ್ಘವಾಗಿ ಮತ್ತು ಸಕ್ರಿಯವಾಗಿ ತೊಡಗಿಸಿಕೊಂಡು ಈಗಲೂ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಲಾಲಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರು ಪಾಲ್ಗೊಳ್ಳುವ ಬಗ್ಗೆ ಇನ್ನೂ ಖಚಿತವಾದವ ಮಾಹಿತಿ ಇಲ್ಲ. ಆದರೆ ಉಮಾಭಾರತಿ ಅಯೋಧ್ಯೆಯಲ್ಲೇ ಇದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಕೊರೋನಾ ಪಾಸಿಟಿವ್ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವುದರಿಂದ ಇಡೀ ಅಯೋಧ್ಯೆ ನಗರದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಮೋದಿ ಸಂಚರಿಸುವ ದಾರಿಯಲ್ಲಿ ಈಗಾಗಲೇ ಸ್ವಚ್ಚತಾ ಕಾರ್ಯ ಮಾಡಲಾಗುತ್ತಿದ್ದು, ಸಾರ್ವಜನಿಕರ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ತಿಳಿದುಬಂದಿದೆ.
ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಅಯೋಧ್ಯೆಯ ಶ್ರೀರಾಮನಿಗಾಗಿ ವಿಶೇಷ ಉಡುಗೆಯ ತಯಾರಿ ಕೂಡ ನಡೆದಿದೆ. ಬಾಬು ಲಾಲ್ ಟೇಲರ್ ಎಂಬುವವರು ನವರತ್ನ ಖಚಿತವಾದ ಉಡುಗೆ ತಯಾರಿಸುತ್ತಿದ್ದಾರೆ.
ಬಾಬು ಲಾಲ್ ಕುಟುಂಬ ನಾಲ್ಕು ತಲೆಮಾರುಗಳಿಂದಲೂ ಶ್ರೀರಾಮನಿಗೆ ಬಟ್ಟೆ ಹೊಲೆಯುತ್ತಿದೆ. ಸೂರತ್ನಿಂದ ಬರುವ ವಿಶೇಷವಾದ ಬಟ್ಟೆಯಿಂದ ಏಳು ರೀತಿಯ ಉಡುಗೆಗಳನ್ನು ಸಿದ್ದಪಡಿಸಲಾಗುತ್ತಿದೆ.
ಇಂದು ಬಿಳಿ, ನಾಳೆ ಕೆಂಪು, ಶಿಲಾನ್ಯಾಸದ ದಿನವಾದ ನಾಳೆ ಶ್ರೀರಾಮ ಹಸಿರು ಮತ್ತು ಕೇಸರಿ, ಗುರುವಾರ ಹಳದಿ, ಶುಕ್ರವಾರ ಬಿಳಿ, ಶನಿವಾರ ನೀಲಿ, ಭಾನುವಾರ ಗುಲಾಮಿ ಬಣ್ಣದ ಬಟ್ಟೆ ತೊಡಲಿದ್ದಾನೆ ಎನ್ನಲಾಗಿದೆ.