ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಯಲಿ: ಡಾ. ವೀರೇಂದ್ರ ಹೆಗ್ಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ನ.26- ಸಾಮಾನ್ಯವಾಗಿ ಇಂದಿನ ಜಗತ್ತಿನಲ್ಲಿ ವೃದ್ಧರನ್ನು ಅಸಹಾಯಕರನ್ನು ಕಡೆಗಣಿಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಅನಾಥರ ಅಥವಾ ಅಸಹಾಯಕರ ಕಣ್ಣೀರು ಅಥವಾ ವೇದನೆ ಶಾಪವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ. ಇಂದು ವಿದ್ಯಾವಂತರು ಓದಿ ಪಟ್ಟಣ ಸೇರಿಕೊಂಡಿದ್ದಾರೆ. ಆದರೆ ಹಿರಿಯರು ಹಳ್ಳಿಗಳಲ್ಲೇ ತಮಗೆ ಯಾರೂ ಇಲ್ಲ ಎಂದು ಕೊರಗುವಂತಾಗಿದೆ. ಈ ಮನಃಸ್ಥಿತಿ ಬದಲಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.

ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರ ಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಸಮಾಜದಲ್ಲಿರುವ ಬಡವರಿಗೆ, ನೊಂದವರಿಗೆ, ವಿಶೇಷ ಚೇತನರಿಗೆ ನೆರವು ನೀಡುವ ಕಾರ್ಯಕ್ರಮ ವಾತ್ಸಲ್ಯ ಯೋಜನೆ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯರು ಯಾವುದೇ ಕಾರಣಕ್ಕೂ ನಮ್ಮನ್ನು ಕಿರಿಯರು ಕಡೆಗಣಿಸುತ್ತಿದ್ದಾರೆ ಎಂದು ಕಣ್ಣೀರು ಹಾಕುವಂತಾಗಬಾರದು. ಹೀಗೆ ಮಾಡಿದಲ್ಲಿ ಒಂದು ದಿನ ತನ್ನನ್ನು ತಾನು ಅನಾಥನನ್ನಾಗಿ ಮಾಡಿಕೊಳ್ಳುವ ದಿನ ಬರಬಹುದು. ಆದ್ದರಿಂದ ಹಿರಿಯರನ್ನು ಗೌರವಿಸುವ ಪರಿಪಾಠ ಸಮಾಜದಲ್ಲಿ ಬೆಳೆಯಬೇಕಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಗಿದ್ದೇ ಬಡವರು, ನಿರಕ್ಷರಸ್ಥರು, ಹಿಂದುಳಿದವರು ಅಭಿವೃದ್ಧಿ ಹೊಂದಬೇಕು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ. ಯೊಜನೆಯ ಮೂಲಕ ಬದುಕಿಗೆ ಮಾರ್ಗದರ್ಶನ ಮಾಡುವ, ಸ್ವಾಭಿಮಾನದ ವಿಶೇಷತೆಯನ್ನು ತಿಳಿಸುವ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.

ವಾತ್ಸಲ್ಯ ಯೋಜನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ಪಕ್ಕಪಕ್ಕದಲ್ಲಿರುವವರು ಆಹಾರ ಕೊಡಬೇಕು, ಸಹಾಯ ಮಾಡಬೇಕು. ವೃದ್ಧರಿಗೆ, ಸಮಾಜದಲ್ಲಿ ಕಡೆಗಣಸಲ್ಪಟ್ಟವರಿಗೆ ಈ ಸಹಾಯ ಮಾಡಲಾಗುತ್ತಿದ್ದು, ಅವರು ಬದುಕಿದ್ದಷ್ಟು ದಿನ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕಿದೆ ಎಂದರು.

ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಕಷ್ಟದಲ್ಲಿರುವವರ ಬಗ್ಗೆ ಕಾಳಜಿ ವಹಿಸುವ ಚಿಂತನೆ ನಡೆಸಿದಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವಾತ್ಸಲ್ಯ ಫಲಾನುಭವಿಗಳನ್ನು ಗುರುತಿಸುವ ಸಂದರ್ಭದಲ್ಲೂ ಸುಮಾರು 4 ಸಾವಿರ ಜನರನ್ನು, ನೆರೆಹೊರೆಯವರು ಸಲಹುತ್ತಿದ್ದಾರೆ. ಬಡವರನ್ನು ಮೇಲೆತ್ತುವುದು ಮಾನವೀಯ ಧರ್ಮವೂ ಆಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್. ಎಚ್. ಮಂಜುನಾಥ್ , ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಎಸ್.ಡಿ.ಎಂ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Facebook Comments