BIG NEWS : ವಿಖಾಖಪಟ್ಟಣಂನಲ್ಲಿ ಭೂಪಾಲ್ ಮಾದರಿ ಅನಿಲ ದುರಂತ, 8 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶಾಖಪಟ್ಟಣಂ, ಮೇ 7- ಮಧ್ಯಪ್ರದೇಶದ ಭೂಪಾಲ್ ಘೋರ ಅನಿಲ ದುರಂತವನ್ನು ನೆನಪಿಸುವಂಥ ಭೀಕರ ದುರ್ಘಟನೆಯೊಂದು ಆಂಧ್ರಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಕರಾವಳಿ ಜಿಲ್ಲೆ ವಿಶಾಖಪಟ್ಟಣಂ ರಾಸಾಯನಿಕ ಘಟಕವೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಎಂಟು ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಜನರು ತೀವ್ರ ಆಸ್ಥಸ್ಥರಾಗಿದ್ದಾರೆ. ಅಲ್ಲದೆ, 5000ಕ್ಕೂ ಅಧಿಕ ನಿವಾಸಿಗಳು ಗ್ಯಾಸ್ ಲೀಕ್‍ನಿಂದ ಬಾಧಿತರಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಗೋಪಾಲಪುರಂನ ಎಲ್‍ಜಿ ಪಾಲಿಮರ್ ಲಿಮಿಟೆಡ್‍ನಿಂದ ಇಂದು 3 ಗಂಟೆ ನಸುಕಿನಲ್ಲಿ ವಿಷಾನಿಲ ಸೋರಿಕೆಯಾಗಿ ಅಕ್ಕಪಕ್ಕದ ಕಾಲೋನಿಗಳಿಗೆ ಹರಡಿತು. ಗಾಢ ನಿದ್ರೆಯಲ್ಲಿದ್ದ ಜನರಲ್ಲಿ ಅನೇಕರು ಅಸ್ವಸ್ಥರಾದರು.

ಈ ದುರ್ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಿಲ ಸೋರಿಕೆಯಿಂದ ಕೆಮಿಕಲ್ ಪ್ಲಾಂಟ್‍ನ ಅಕ್ಕಪಕ್ಕದ ಅನೇಕ ನಿವಾಸಿಗಳಿಗೆ ಕಣ್ಣುರಿ, ಉಸಿರಾಟ ಸಮಸ್ಯೆ, ಶಿರೋಭ್ರಮಣೆ, ವಾಸಿ ಮತ್ತು ಹೊಟ್ಟೆ ತೊಳಸಿದಂತಾಗಿ ಅಸ್ವಸ್ಥರಾದರು. ವಿಷಾನಿಲ ಸಂಪರ್ಕಕ್ಕೆ ಬಂದ ಅನೇಕರ ಮೈಮೇಲೆ ಗುಳ್ಳೆಗಳಾಗಿದ್ದು, ತೀವ್ರ ಕೆರತಕ್ಕೂ ಕಾರಣವಾಗಿದೆ.

ಅನಿಲ ಸೋರಿಕೆಯಿಂದ ಸಾವು-ನೋವು ಸಂಭವಿಸಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ವಿಶಾಖಪಟ್ಟಣಂ ಜಿಲ್ಲಾ ಕಲೆಕ್ಟರ್ ವಿ.ವಿನಯ್ ಚಂದ್ ಹೇಳಿದ್ದಾರೆ. ತೀವ್ರ ಆಸ್ವಸ್ಥರಾದ 200ಕ್ಕೂ ಹೆಚ್ಚು ಮಂದಿಯನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಸೇರಿಸಲಾಗಿದೆ.

ಅನಿಲ ಸೋರಿಯಿಂದ ಅಸ್ವಸ್ಥರಾದ ಜನರು ಪ್ರಜ್ಞಾಶೂನ್ಯರಾಗಿ ರಸ್ತೆಗಳ ಮೇಲೆ ಬಿದ್ದಿರುವ ದೃಶ್ಯಗಳನ್ನು ಟಿವಿ ಚಾನೆಲ್‍ಗಳು ಬಿತ್ತರಿಸುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್)ಯ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.

ವಿಷಾನಿಲ ಇತರ ಪ್ರದೇಶಗಳಿಗೂ ಹಬ್ಬದಂತೆ ತಡೆಯಲು ಗೋಪಾಲಪುರಂನನ್ನು ಸೀಲ್‍ಡೌನ್ ಮಾಡಲಾಗಿದ್ದು, ಅನಿಲ ಸೋರಿಕೆ ತೀವ್ರತೆಯನ್ನು ನಿಯಂತ್ರಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಅಧಿಕಾರಿಯೊಬ್ಬರು ಆದೇಶಿಸಿದ್ದಾರೆ.
ಅನಿಲ ಸೋರಿಕೆಯಿಂದ ಗೋಪಾಲಪುರಂ ಮತ್ತು ಸುತ್ತಮುತ್ತಲ ಪ್ರದೇಶಗಳ 5,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

ಅನಿಲ ಸೋರಿಕೆ ದುರಂತದ ಬಗ್ಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅಸ್ವಸ್ಥರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಸಂತ್ರಸ್ಥರಿಗೆ ಅಗತ್ಯ ಪರಿಹಾರ ನೀಡುವಂತೆ ವಿಶಾಖಪಟ್ಟಣಂ ಜಿಲ್ಲಾ ಕಲೆಕ್ಟರ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಅನಿಲ ಸೋರಿಕೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಎಲ್‍ಜಿ ಪಾಲಿಮರ್ಸ್ ಲಿಮಿಟೆಡ್‍ನ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

ಈ ಘಟನೆ ಭೂಪಾಲ್ ಘೋರ ಅನಿಲ ದುರಂತ ಘಟನೆಯನ್ನು ನೆನಪಿಸಿದೆ. 1984ರ ಡಿಸೆಂಬರ್ 3ರ ನುಸುಕಿನಲ್ಲಿ ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್)ನಿಂದ ಅತ್ಯಂತ ವಿಷಯುಕ್ತ ಮಿಥೈಲ್ ಐಸೋಸೈನೆಟ್ (ಎಂಐಸಿ) ಅನಿಲ ಸೋರಿಕೆಯಾಗಿ 3,787 ಮಂದಿ ಮೃತಪಟ್ಟು, 5.58 ಲಕ್ಷ ಮಂದಿ ಅಸ್ವಸ್ಥರಾದರು. ಇದು ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾಗಿದೆ.

Facebook Comments

Sri Raghav

Admin