ಕೊನೆಗೂ ಮೈಸೂರಲ್ಲಿ ವಿಷ್ಣು ಸ್ಮಾರಕಕ್ಕೆ ಅಡಿಗಲ್ಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಕಳೆದ ಹಲವು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇದ್ದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಶಂಕುಸ್ಥಾಪನೆ ಕೊನೆಗೂ ಇಂದು ಅಕೃತವಾಗಿ ನೆರವೇರಿತು.

ಮುಖ್ಯಮಂತ್ರಿಗಳ ಅಕೃತ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ , ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಕೆ.ಸುಧಾಕರ್, ಫಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆನ್‍ಲೈನ್ ಮೂಲಕ ಚಾಲನೆ ಕೊಟ್ಟರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಡಾ|| ವಿಷ್ಣುವರ್ಧನ ಅವರ 70ನೇ ವರ್ಷದ ಹುಟ್ಟುಹಬ್ಬದ, ವಿಶೇಷ ಸಂಧರ್ಭದಲ್ಲಿ ದಿವಂಗತ ಡಾ|| ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು ಎಂದು ಸ್ಮರಿಸಿದರು.

ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ತಮ್ಮ ಅಭಿಮಾನಿಗಳ ಪಾಲಿಗೆ `ಸಾಹಸ ಸಿಂಹ’ಎಂದೇ ಪ್ರಖ್ಯಾತರಾದ ವಿಷ್ಣು ತಮ್ಮ ಶಿಸ್ತು, ಸಂಯಮಗಳಿಂದ ಎಲ್ಲರ ಪ್ರೀತಿಯನ್ನು ಗೆದ್ದಿದ್ದರು ಎಂದು ಪ್ರಶಂಸಿಸಿದರು.

ಕನ್ನಡ ಚಿತ್ರರಂಗಕ್ಕೆ ಡಾ|| ರಾಜ್‍ಕುಮಾರ್ ಅವರ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ಡಾ|| ವಿಷ್ಣುವರ್ಧನ್ ಅವರು ಸಹ ಸೇರಿದ್ದಾರೆ. ಸತತವಾಗಿ 38 ವರ್ಷಗಳ ಕಾಲ, ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ನಾಗರಹಾವು ಸಿನಿಮಾದಿಂದ ಆಪ್ತರಕ್ಷಕ ಸಿನಿಮಾವರೆಗಿನ, ಅವರ ಸಾಧನೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ಅವರು ಸಿನಿಮಾ ರಂಗದ ಜೊತೆಗೆ ವಿಶೇಷವಾದ ಸಾಮಾಜಿಕ ಕಳಕಳಿ ಹೊಂದಿದ್ದರು. ಸಮಾಜದ ಆಗು-ಹೋಗುಗಳ ಬಗ್ಗೆ ಸ್ಪಂದಿಸುವ ಮತ್ತು ಮಾನವೀಯತೆ ತೋರುವ ವಿಶೇಷ ಗುಣ ಅವರಲ್ಲಿತ್ತು ಎಂದರು.

ಡಾ. ವಿಷ್ಣುವರ್ಧನ್ ಅವರ ಶ್ರೀಮತಿ ಪದ್ಮಶ್ರಿ ಪುರಸ್ಕøತರಾದ ಡಾ. ಭಾರತಿ ವಿಷ್ಣುವರ್ಧನ್ ಅವರು ಪಂಚಭಾಷಾ ತಾರೆಯಾಗಿ, ಅತ್ಯುತ್ತಮ ಕಲಾವಿದೆ. ಅಳಿಯ ಅನಿರುದ್ಧ್ ಅವರು ಉತ್ತಮ ಕಲಾವಿದರು ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ. ಆದ್ದರಿಂದ ಕಾಮಗಾರಿಗಳನು ಆದಷ್ಟು ಬೇಗನೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಡಾ|| ವಿಷ್ಣುವರ್ಧನ್ ಅವರ ತವರು ಜಿಲ್ಲೆ ಮೈಸೂರಿನಲ್ಲಿ, ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

ಮೈಸೂರು ತಾಲ್ಲೂಕಿನ ಹೆಚ್.ಡಿ.ಕೋಟೆ ರಸ್ತೆಯ ಮಾರ್ಗದಲ್ಲಿ ಬರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣ ಸಂಸ್ಥೆಯ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಆಯವ್ಯಯದಲ್ಲಿ 11 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲು 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ವಿಷ್ಣುವರ್ಧನ್ ಸ್ಮಾರಕವು ಸುಸಜ್ಜಿತವಾಗಿ ನಿರ್ಮಾಣಗೊಳ್ಳಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ. ಡಾ.ವಿಷ್ಣುವರ್ಧನ್ ಅವರ ಕೀರ್ತಿ ಜನ ಮಾನಸದಲ್ಲಿ ಎಂದೆಂದಿಗೂ ಅಜರಾಮರವಾಗಿರಲಿ ಇವರ ನಟನಾ ಕೌಶಲ್ಯ, ಇವರ ಸಾಧನೆಯ ಹಾದಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಯಡಿಯೂರಪ್ಪ ಆಶಿಸಿದರು.

Facebook Comments

Sri Raghav

Admin