ಇಂದು ವಿಷ್ಣು-ಉಪ್ಪಿ-ಶೃತಿ ಹುಟ್ಟುಹಬ್ಬ, ಚಂದನವನದಲ್ಲಿ ಸಂಭ್ರಮ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18-ಚಂದನವನದ ಸಾಹಸಸಿಂಹ ವಿಷ್ಣು, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಖ್ಯಾತ ಕಲಾವಿದೆ ಶೃತಿ ಅವರ ಹುಟ್ಟಹಬ್ಬವನ್ನು ಇಂದು ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಸ್ಯಾಂಡವುಲ್‍ನ ಮೂವರು ದಿಗ್ಗಜರ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಿಗಳು ಸಡಗರ-ಸಂಭ್ರಮದಿಂದ ಆಚರಿಸಿದರು.

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ಪತ್ನಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ದ ಮೈಸೂರಿನಲ್ಲಿರುವ ವಿಷ್ಣು ಸ್ಮಾರಕ ನಿರ್ಮಾಣದ ಜಾಗಕ್ಕೆ ಭೇಟಿ ನೀಡಿ ವಿಷ್ಣು ಭಾವಚಿತ್ರವಿಟ್ಟು ಪುಷ್ಪನಮನ ಸಲ್ಲಿಸಿ ಅನ್ನಸಂತರ್ಪಣೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸರಳವಾಗಿ ಆಚರಿಸಿದರು.

ವಿಷ್ಣು ಅಭಿಮಾನಿಗಳು ಹಾಗೂ ವಿವಿಧ ಟ್ರಸ್ಟ್ , ಸಂಘಸಂಸ್ಥೆಗಳಿಂದ ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಅನ್ನದಾನ ,ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ವಿಷ್ಣು ಅವರ ಅಭಿಮಾನಿಗಳು ಸಾಹಸ ಸಿಂಹನ ಭಾವಚಿತ್ರವಿಟ್ಟು ಪುಷ್ಪನಮನ ಸಲ್ಲಿಸಿ ಸಿಹಿಹಂಚಿ ಸಡಗರ ಸಂಭ್ರಮದಿಂದ ಆಚರಿಸಿದರು. ಕನ್ನಡ ಚಿತ್ರರಂಗದ ನಟನಟಿಯರು, ನಿರ್ದೇಶಕರು, ನಿರ್ಮಾಪಕರು ಟ್ವಿಟರ್ ಮೂಲಕ ವಿಷ್ಣುದಾದನನ್ನು ಸ್ಮರಿಸಿಕೊಂಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ 52ನೇ ಹುಟ್ಟಹಬ್ಬವನ್ನು ಮನೆಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು. ಅಭಿಮಾನಿಗಳು ತನ್ನ ಹುಟ್ಟುಹಬ್ಬಕ್ಕೆ ಹೂವು, ಕೇಕ್‍ಗಳನ್ನು ತರಬಾರದು. ಅದರ ಬದಲು ಪರಿಸರ ಉಳಿಸಲು ಗಿಡವನ್ನು ತಂದುಕೊಡುವಂತೆ ಮನವಿ ಮಾಡಿದರು.

ಅದರಂತೆ ಅಭಿಮಾನಿಗಳು ಸಹ ವಿವಿಧ ರೀತಿಯ ಹೂಗಿಡಗಳನ್ನು ತಂದು ತಮ್ಮ ನೆಚ್ಚಿನ ನಟನಿಗೆ ಉಡುಗೊರೆಯಾಗಿ ನೀಡಿ ಶುಭಾಷಯ ಕೋರಿದರು. ನಟಿ ಶೃತಿ ಅವರು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದು ಅವರು ಕೂಡ ತಮ್ಮ ಕುಟುಂಬ ವರ್ಗದವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟಹಬ್ಬ ಆಚರಿಸಿಕೊಂಡರು.

Facebook Comments

Sri Raghav

Admin