ಸಾಹಸಸಿಂಹ ಡಾ. ವಿಷ್ಣುವರ್ಧನ್ ನಾಟಕೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ನಾಳೆಯಿಂದ ಮೂರು ದಿನಗಳ ಕಾಲ ಡಾ. ವಿಷ್ಣುವರ್ಧನ್ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ.  ಕನ್ನಡಿಗರ ಯಜಮಾನನಿಗೆ ರಂಗ ನಮನ ಸಲ್ಲಿಸುವ ನಿಟ್ಟಿನಲ್ಲಿ ಅವರ ಹುಟ್ಟು ಹಬ್ಬಕ್ಕೆ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕೋರಮಂಗಲದ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಇದೇ 18ರಿಂದ 20ರವರೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ನಾಳೆ ಸಂಜೆ 4.30ಕ್ಕೆ ನಟ ಮತ್ತು ನಿರ್ದೇಶಕ ಎಸ್.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಟ ರಮೇಶ್ ಅರವಿಂದ್ ಅವರಿಗೆ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

ಖ್ಯಾತ ರಂಗಕರ್ಮಿ ಮಂಡ್ಯರಮೇಶ್ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ಸಾಹಿತಿ ಡಾ. ವಿ.ನಾಗೇಂದ್ರಪ್ರಸಾದ್, ನಿರ್ದೇಶಕ ರವಿಶ್ರೀವತ್ಸ, ರಂಗಕರ್ಮಿ ರಾಜಗುರು ಹೊಸಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಸಂಜೆ 6.30ಕ್ಕೆ ಚೋರ ಚರಣದಾಸ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. 19ರಂದು ಸಂಜೆ 4.30ಕ್ಕೆ ಐಎಎಸ್, ಕೆಎಎಸ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮತ್ತು ರಂಗಭೂಮಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷ ಮನುಬಳಿಗಾರ್ ಅವರು, ರಂಗಕರ್ಮಿಗಳಾದ ಹನುಮಕ್ಕ, ಮುರುಡಯ್ಯ, ಆನಂದ ಡಿ.ಕಳಸ, ನಾಟಕಾರರಾದ ಬೇಲೂರು ರಘುನಂದನ್, ಡಾ. ರುದ್ರೇಶ್ ಬಿ.ಅದರಂಗಿ ಅವರಿಗೆ ಸನ್ಮಾನ ಮಾಡಲಿದ್ದಾರೆ.  ಸಾಹಿತಿಗಳಾದ ಜೋಗಿ, ವಿಶ್ವೇಶ್ವರ ಭಟ್, ಹಿರಿಯ ಕಲಾವಿದ ಶರತ್‍ಲೋಹಿತಾಶ್ವ, ರಂಗಭೂಮಿ ಕಲಾವಿದ ನಯನ ಸೂಡ, ಸಾಧನ ಕೋಚಿಂಗ್ ಅಕಾಡೆಮಿ ಸಂಸ್ಥಾಪಕರಾದ ಜ್ಯೋತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 5.30ಕ್ಕೆ ವಿಶ್ವಪಥ ಕಲಾಸಂಗಮದ ವತಿಯಿಂದ ಊರು ಸುಟ್ಟರೂ ಹನುಮಪ್ಪ ಹೊರಗ ಹಾಗೂ ಶರಿಫ್ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ. 20ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಮತ್ತು ಕನ್ನಡ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಡಾ. ಸಂತೋಷ್ ಸು.ಹಾನಗಲ್, ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಪಡುಕೋಟೆ, ಪುಟ್ಟಣ್ಣಕಣಗಲ್ ಸ್ಟುಡಿಯೋ ಮಾಲೀಕ ಪ್ರಶಾಂತ್ ನಿಟ್ಟೂರು ಮತ್ತು ಹನುಮಂತ ಪಿ.ಶೆಟ್ಟಿ ಅವರಿಗೆ ಸನ್ಮಾನ ಮಾಡಲಿದ್ದಾರೆ.

ಸಾಹಿತಿ ಎಚ್.ಎಸ್.ವೆಂಕಟೇಶ್‍ಮೂರ್ತಿ, ಹಿರಿಯಕಲಾವಿದರಾದ ಎಚ್.ಜಿ.ದತ್ತಣ್ಣ, ಕೆ.ಸುಚೇಂದ್ರ ಪ್ರಸಾದ್, ನಾಟಕಕಾರ ಕೆ.ವೈ. ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ವೇಷ ಮತ್ತು ಗುಲಾಬಿ ಗ್ಯಾಂಗು ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಪ್ರತಿದಿನ ಸಂಜೆ 4ಗಂಟೆಗೆ ಡಾ. ವಿಷ್ಣುವರ್ಧನ ಅವರ ಗೀತಗಾಯನ ನಡೆಯಲಿದೆ.

Facebook Comments