ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಎಚ್.ವಿಶ್ವನಾಥ್
ಬೆಂಗಳೂರು,ಡಿ.1- ನನ್ನನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳದಂತೆ ಹೈಕೋರ್ಟ್ನ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸನ್ನಿಸುತ್ತೇನೆಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹೈಕೋರ್ಟ್ನಲ್ಲಿ ನನ್ನ ಅನರ್ಹತೆ ಕುರಿತಂತೆ ವಿಭಾಗೀಯ ಪೀಠ ತೀರ್ಪು ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದರು.
ಮಾಧ್ಯಮಗಳಲ್ಲಿ ನನ್ನ ಕೆಲವು ವಿಚಾರಗಳು ಪ್ರಸ್ತಾಪವಾಗಿವೆ. ನಾನು ರಾಜಕಾರಣವನ್ನು ಎಂದಿಗೂ ವ್ಯವಹಾರಿಕವಾಗಿ ತೆಗೆದುಕೊಂಡಿಲ್ಲ. ಲಾಭ, ನಷ್ಟ ನೋಡಿಕೊಂಡು ರಾಜಕಾರಣಕ್ಕೂ ಬಂದಿಲ್ಲ. ಹೈಕೋರ್ಟ್ ನೀಡಿರುವ ತೀರ್ಪಿನಿಂದ ದೊಡ್ಡ ದುರಂತ ಸಂಭವಿಸಿಲ್ಲ. ಕಾನೂನಿನ ಪ್ರಕಾರ ಏನಾಗಬೇಕೋ ಅದು ಆಗಿದೆ ಎಂದರು.
2027ರ ಜೂನ್ವರೆಗೂ ನನ್ನ ವಿಧಾನಪರಿಷತ್ ಸ್ಥಾನ ಆಭಾದಿತ. ಹೈಕೋರ್ಟ್ ನೀಡಿರುವ ಆದೇಶವನ್ನು ನಾನು ಪೂರ್ತಿ ಓದಿಲ್ಲ. ಅದನ್ನು ಓದಿಕೊಂಡು ಮುಂದಿನ ಹೆಜ್ಜೆ ಹಿಡುತ್ತೇನೆ ಎಂದು ತಿಳಿಸಿದರು. ಕಳೆದ ಜೂನ್ ತಿಂಗಳಿನಲ್ಲಿ ಬಿಜೆಪಿ ವಿಧಾನಸಭೆಯಿಂದ ವಿಧಾನಪರಿಷತ್ ಆಯ್ಕೆ ಮಾಡುವ ಸದಸ್ಯರಲ್ಲಿ 4 ಹೆಸರಿನಲ್ಲಿ ನನ್ನ ಹೆಸರೂ ಇತ್ತು. ಆದರೆ, ದೆಹಲಿಗೆ ಹೋದಾಗ ನನ್ನ ಹೆಸರನ್ನು ಕೊನೆ ಕ್ಷಣದಲ್ಲಿ ಕೈ ಬಿಡಲಾಯಿತು. ಯಾವ ಕಾರಣಕ್ಕಾಗಿ ಕೈ ತಪ್ಪಿತು ಎಂಬುದು ಗೊತ್ತಿಲ್ಲ. ಬಳಿಕ ನನ್ನನ್ನು ಪರಿಷತ್ಗೆ ನಾಮನಿರ್ದೇಶನ ಮಾಡಲಾಯಿತು ಎಂದರು.
ನಾವು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಪತನಗೊಳಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಆರೋಪಿಸಿರುವಂತೆ ಸಿದ್ದರಾಮಯ್ಯನವರಿಂದಲೇ ಸರ್ಕಾರ ಪತನವಾಯಿತು ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರು ಕುಮಾರಸ್ವಾಮಿ ಅವರ ಮೇಲೆ ಆರೋಪಿಸುತ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲದ ರಾಕ್ಷಸ ಸರ್ಕಾರ ಬೀಳಿಸಲು ನಾವು ಕಾರಣರಾಗಿದ್ದೇವೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
ಯಾರೂ ನಮ್ಮಿಂದ ಸರ್ಕಾರ ರಚನೆ ಮಾಡಿ ಏನೇನೋ ಆಗಿದ್ದಾರೆ. ಅವರೆಲ್ಲ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ನನ್ನ ಹೆಸರನ್ನು ದೆಹಲಿಯಲ್ಲಿ ಸಚಿವ ಸ್ಥಾನದ ಪಟ್ಟಿಯಿಂದ ತೆಗೆಸಿದ್ದರ ನೋವು ಈಗಲೂ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆ ತೀಕ್ಷಣ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಕೊಚ್ಚೆಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳುವುದಿಲ್ಲ. ಅವನ್ಯಾವನ್ರೀ ಸಾ.ರಾ.ಮಹೇಶ್ ? ಅವನ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.