ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ, ಮಂತ್ರಿಯಾಗುವ ವಿಶ್ವನಾಥ್‌ ಕನಸು ಭಗ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ನಾಮ ನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ನೀಡುವುದು ಅಸಾಧ್ಯ ಎಂದು ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್ ಅವರ ಸಚಿವ ಸ್ಥಾನದ ಕನಸು ಭಗ್ನವಾಗಿದೆ. ಎಂಎಲ್‍ಎ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಮೇಲ್ಮನೆಗೆ ನಾಮಕರಣ ಸದಸ್ಯರಾಗಿ ನೇಮಕವಾದ ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ವಿಶ್ವನಾಥ್ ಅವರಿಗೆ ತೀವ್ರ ನಿರಾಸೆಯಾಗಿದೆ. ನಾಮ ನಿರ್ದೇಶನದ ಆಧಾರದಲ್ಲಿ ಸಚಿವ ಸ್ಥಾನ ಪಡೆಯುವುದು ಅಸಾಧ್ಯ. ನಾಮ ನಿರ್ದೇಶನಗೊಂಡವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಹೈಕೋರ್ಟ್ ನೀಡಿದ ಆದೇಶವನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಹೀಗಾಗಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದು ಸಾಧ್ಯವಿಲ್ಲದಂತಾಗಿದೆ.

ಸಾಹಿತ್ಯ ಕೋಟಾದಡಿ ಎಚ್.ವಿಶ್ವನಾಥ್ ಅವರು ಮೇಲ್ಮನೆಗೆ ನಾಮನಿರ್ದೇಶನವಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ 17 ಜನ ಹೊರಬಂದು ಬಿಜೆಪಿ ಸರ್ಕಾರ ರಚನೆಯಲ್ಲಿ ಎಚ್.ವಿಶ್ವನಾಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ವಿಶ್ವನಾಥ್ ಅವರು ಸೋಲನುಭವಿಸಿದ್ದರು. ನಂತರ ಅವರನ್ನು ಮೇಲ್ಮನೆಗೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಸಚಿವ ಸ್ಥಾನಕ್ಕಾಗಿ ಅವರು ಆಗ್ರಹ ಮಾಡಿದ್ದರು. ಅನರ್ಹಗೊಂಡ ಶಾಸಕರು ಯಾವುದೇ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅವರಿಗೆ ಸಾಂವಿಧಾನಿಕ ಹುದ್ದೆ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ವಿಶ್ವನಾಥ್ ಅವರು ಮೇಲ್ಮನೆಗೆ ಸಾಹಿತ್ಯ ಕೋಟಾದಡಿ ಮೇಲ್ಮನೆಗೆ ನೇಮಕಗೊಂಡಿದ್ದರು. ಹಾಗಾಗಿ ಅವರಿಗೆ ಸಚಿವ ಸ್ಥಾನ ದೊರೆಯಲು ಅವಕಾಶ ಸಿಕ್ಕಿಲ್ಲ.

Facebook Comments