ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಿದವರು ಯಾರು ಎಂಬುದು ಜಗಜ್ಜಾಹೀರಾಗಿದೆ : ಎಚ್. ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿದ್ದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಈಗ ಅವರು ಗಿಡುಗ-ಹದ್ದಿನ ಕಥೆ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ದೋಸ್ತಿ ಸರ್ಕಾರವನ್ನು ವಿಶ್ವನಾಥ್ ಮತ್ತು ಸ್ನೇಹಿತರು ಅಸ್ಥಿರಗೊಳಿಸಿದರೆಂದು ಕುಮಾರಸ್ವಾಮಿ ಅಪಪ್ರಚಾರ ಮಾಡುತ್ತಿದ್ದರು. ಈಗ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಮಹಾಧೂತರು. ಸರ್ಕಾರ ಅಸ್ಥಿರಗೊಳಿಸಿರುವುದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ ಈಗ ಹದ್ದಿನ ಕತೆ ಹೇಳಿಕೊಂಡು ಜನರಿಗೆ ಪುಕ್ಕಟ್ಟೆ ಮನರಂಜನೆ ನೀಡುತ್ತಿದ್ದಾರೆ. ಸರ್ಕಾರ ಪತನವಾಗುವುದಕ್ಕೆ ಈ ಇಬ್ಬರು ನಾಯಕರ ಪಾತ್ರ ಶೇ.50:50ರಷ್ಟಿದೆ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹೇಳಿಕೆ ಗಮನಿಸಿದರೆ ಸಾಕು. ಇದಕ್ಕಿಂತ ಬೇರೆ ಸಾಕ್ಷಿ ಏಕೆ ಬೇಕು? ತಡವಾಗಿಯಾದರೂ ಇಬ್ಬರೂ ಸತ್ಯವನ್ನೇ ಹೇಳುತ್ತಿದ್ದಾರೆ. ತಮ್ಮ ಸ್ವಯಂಕೃತ ಅಪರಾಧದಿಂದಲೇ ಸರ್ಕಾರವನ್ನು ಬಲಿಕೊಟ್ಟ ಅಪಕೀರ್ತಿ ಇಬ್ಬರಿಗೂ ಸಲ್ಲಬೇಕು ಎಂದು ಕಿಡಿಕಾರಿದರು.

ನ್ಯಾಯಾಲಯದಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇಂದು ಸಂಜೆ ಅಥವಾ ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವೂ ಇದೆ. ಅಂತಿಮವಾಗಿ ತೀರ್ಪು ಏನಾಗುತ್ತದೋ ಕಾದು ನೋಡೋಣ ಎಂದರು. ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವವರು ಬಿಜೆಪಿಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಇನ್ನೇನು ಕಾಂಗ್ರೆಸ್-ಜೆಡಿಎಸ್‍ನಿಂದ ಸ್ಪರ್ಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಯಾವಾಗ ಪಕ್ಷಕ್ಕೆ ಸೇರ್ಪಡೆಯಾಗಬೇಕು, ಯಾವಾಗ ನಾಮಪತ್ರ ಸಲ್ಲಿಸಬೇಕು ಎಂಬುದು ನ್ಯಾಯಾಲಯ ಕೊಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ ಎಂದರು. ಹುಣಸೂರು ಕ್ಷೇತ್ರದಲ್ಲಿ ನೀವು, ಇಲ್ಲವೆ ನಿಮ್ಮ ಪುತ್ರ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಅದನ್ನು ಸಮಯವೇ ತೀರ್ಮಾನಿಸಲಿದೆ.

ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಈಗಲೂ ಜೆಡಿಎಸ್‍ನಲ್ಲೇ ಇದ್ದಾರೆ. ಇದು ಅಧಿಕಾರದ ರಾಜಕಾರಣ ಕಾಲ. ಇಂತಹ ಘಟನೆಗಳು ಸರ್ವೆ ಸಾಮಾನ್ಯ ಎಂದು ತಿಳಿಸಿದರು. ಹುಣಸೂರಿನಲ್ಲಿ ಉತ್ತಮವಾದ ವಾತಾವರಣವಿದೆ. ನಾನು ಇಲ್ಲವೆ ನನ್ನ ಮಗ ಉಪಚುನಾವಣೆಗೆ ನಿಂತರೆ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದೆ. ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ. ಅದನ್ನು ಹೊರತುಪಡಿಸಿದರೆ ಯಾವುದೇ ರೀತಿಯ ರಾಜಕಾರಣದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments