“ಒಳಗೆ ಅಡಗಿ ಕುಳಿತಿರುವ ಏ..ಮಹೇಶ ಹೊರಗೆ ಬಾರೋ…!”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.17- ದೇವಾಲಯದ ಒಳಗೆ ಅಡಗಿ ಕುಳಿತಿರುವ ಏ… ಮಹೇಶ ಹೊರಗೆ ಬಾರೋ… ಎಂದು ಅನರ್ಹ ಶಾಸಕ ವಿಶ್ವನಾಥ್ ಇಂದು ಪಂಥಾಹ್ವಾನಕ್ಕೆ ಬಂದಿದ್ದ ಸಾ.ರಾ.ಮಹೇಶ್ ಅವರನ್ನು ಕೂಗಿ ಕರೆದರು.  ಚಾಮುಂಡಿಬೆಟ್ಟದ ದೇವಾಲಯದ ಗೋಪುರದ ಬಳಿ ಸಾ.ರಾ.ಮಹೇಶ್‍ಗಾಗಿ 35 ನಿಮಿಷ ಕಾದು ಅವರು ಹೊರಬರದ ಹಿನ್ನೆಲೆಯಲ್ಲಿ ಅವರನ್ನು ಕುರಿತು ಹೀಗೆ ಮಾತನಾಡಿ, ವೈಷಂಪಾಯನ ಸರೋವರದಲ್ಲಿ ಕುಳಿತಂತೆ ದೇವಾಲಯದಲ್ಲಿ ಏಕೋ ಅಡಗಿ ಕುಳಿತಿದ್ದೀಯ. ಹೊರಗೆ ಬಾರೋ, ನಾನಿಲ್ಲಿ ನಿನಗಾಗಿ ಕಾಯುತ್ತಿದ್ದೇನೆ ಎಂದು ಆರ್ಭಟಿಸಿದರು.

ಸಾ.ರಾ.ಮಹೇಶ್ ಪಲಾಯನವಾದಿ. ಅವನು ಹೇಳಿದಂತೆ ನಾನು 8.50ಕ್ಕೆ ದೇವಾಲಯಕ್ಕೆ ಬಂದು ದೇವಿ ದರ್ಶನ ಮಾಡಿ 9 ಗಂಟೆಯಿಂದಲೂ ಕಾಯುತ್ತಿದ್ದೇನೆ. ಆದರೂ ದೇವಾಲಯದಲ್ಲೇ ಏಕೆ ಅಡಗಿ ಕುಳಿತಿದ್ದೀಯ. ಹೊರಗೆ ಬಾ ಎಂದು ಕರೆದರು. ಅವರು ಹೊರಗೆ ಬಾರದೆ ಇರುವುದರಿಂದ ನಾನು 25 ಕೋಟಿ ರೂ. ಪಡೆದಿದ್ದೇನೆ ಎಂಬ ಅವರ ಆರೋಪಗಳು ಈಗ ಸುಳ್ಳಾಗಿವೆ.

ನಾನು ಒಂದು ವೇಳೆ ಕೋಟಿ ಕೋಟಿ ಹಣ ಪಡೆದಿದ್ದರೆ ಅವನು ಅದನ್ನು ಸಾಬೀತುಪಡಿಸಬೇಕಿತ್ತು. ಆದರೆ, ಬೆಟ್ಟಕ್ಕೆ ಬಂದರೂ ನಮ್ಮ ಬಳಿ ಬಾರದಿರುವುದನ್ನು ನೋಡಿದರೆ ಅವನು ನನ್ನ ಬಗ್ಗೆ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂಬುದು ಗೊತ್ತಾಗುತ್ತದೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಯಾರ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ. ಸಾ.ರಾ.ಮಹೇಶ್ ಹೇಳಿಕೆ ಶುದ್ಧ ಸುಳ್ಳು ಎಂದು ಸಾಬೀತಾಯಿತು ಎಂದರು.

ನಾನು 25 ಕೋಟಿ ರೂ. ಯಾರಿಂದ ಪಡೆದಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೋ ಅವರನ್ನು ನನ್ನ ಮುಂದೆ ಕರೆತಂದು ನಿಲ್ಲಿಸುವಂತೆ ನಾನು ಹೇಳಿದ್ದೆ. ಆಗ ನಾನು ಹಣ ಪಡೆದಿದ್ದೇನೋ, ಇಲ್ಲವೋ ಎಂಬುದನ್ನು ಕೇಳುತ್ತೇನೆ ಎಂದಿದ್ದೆ. ಆದರೆ ಹಣ ಕೊಟ್ಟವರನ್ನು ಆತ ಕರೆತಂದಿಲ್ಲ. ಹಾಗಾಗಿ ಅವನು ನನ್ನ ಮುಂದೆ ಬರುತ್ತಿಲ್ಲ. ಅಲ್ಲೇ ಅರ್ಥವಾಗುತ್ತದೆ. ನಾನು ಯಾರಿಂದಲೂ ಹಣ ಪಡೆದಿಲ್ಲ ಎಂಬುದು ಎಂದು ಹೇಳಿದರು.

ಈಗ ಈ ನಾಡಿನ ಜನತೆಗೆ ಗೊತ್ತಾಯಿತು. ನಾನು ಭ್ರಷ್ಟಾಚಾರಿಯಲ್ಲ ಎಂಬುದು ಎಂದು ತಿಳಿಸಿದರು. ಮುಂದಿನ ಉಪಚುನಾವಣೆಯಲ್ಲಿ ನಾನು ಹುಣಸೂರಿನಿಂದ ಸ್ಪರ್ಧಿಸುತ್ತೇನೆ. ನಾನೇ ಗೆಲ್ಲುತ್ತೇನೆ. ಮೂರನೇ ಸ್ಥಾನಕ್ಕೆ ಹೋಗುವುದು ನಾನಲ್ಲ. ನಿಮ್ಮ ಪಕ್ಷದವರು ಎಂದು ಟಾಂಗ್ ನೀಡಿದರು. ನಂತರ ಪೊಲೀಸರ ಬಿಗಿಭದ್ರತೆಯಲ್ಲಿ ಬೆಟ್ಟದಿಂದ ತೆರಳಿದರು.

Facebook Comments