ನಾವು ಯಾರೂ ಪದವಿಗಾಗಿ ಪದತ್ಯಾಗ ಮಾಡಿಲ್ಲ : ಎಚ್.ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಅ.20- ನಾವು ಯಾರೂ ಪದವಿಗಾಗಿ ಪದತ್ಯಾಗ ಮಾಡಿಲ್ಲ. ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣಕ್ಕೆ ಬೇಸತ್ತು ರಾಜೀನಾಮೆ ನೀಡಿದೆವು ಎಂದು ಅನರ್ಹಗೊಂಡ ಶಾಸಕ ಎಚ್.ವಿಶ್ವನಾಥ್ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಅಡಗೂರು ಎಚ್.ವಿಶ್ವನಾಥ್ ವಿಶ್ವಾಸಿಗಳ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಮೂರು ತಿಂಗಳ ಹಿಂದೆ ಅಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ರಾಕ್ಷಸರ ರಾಜಕಾರಣ ನಡೆಯುತ್ತಿತ್ತು.

ಪಕ್ಷದ ಬಗ್ಗೆ ನನಗೆ ಭಿನ್ನಾಭಿಪ್ರಾಯವಿರಲಿಲ್ಲ. ಆದರೆ, ಪಕ್ಷ ನಡೆಸುವವರು ಮಾಡಿದ ಅಪಮಾನಗಳಿಂದ ಮನನೊಂದಿದ್ದೆ. ನನ್ನಂತೆ ಉಳಿದ 16 ಶಾಸಕರು ಎರಡೂ ಪಕ್ಷಗಳ ರಾಕ್ಷಸ ರಾಜಕಾರಣವನ್ನು ಕಂಡು ಅಪಮಾನ ಅನುಭವಿಸಿ ಬೇಸತ್ತಿದ್ದರು ಎಂದು ಹೇಳಿದರು. ಆಗ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರೇ ಸರ್ಕಾರವನ್ನು ಕೊಲೆ ಮಾಡಿದರು ಎಂದು ಆರೋಪಿಸಿದರು.

ಸರ್ಕಾರದ ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಅಧ್ಯಕ್ಷನಿಗೆ ಸ್ಥಾನವಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಒಬ್ಬ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಲಾಗಲಿಲ್ಲ. ಸ್ವತಃ ನನ್ನ ಅಳಿಯನಿಗೆ ಒಂದು ಕೆಲಸ ಮಾಡಲು ಪಕ್ಷ ಬಿಡಲಿಲ್ಲ. ಅಧಿಕಾರ ಇಲ್ಲದ ಮೇಲೆ ಅದೆಂತಹ ಪದವಿ ಎನ್ನುವ ಬೇಸರ ನನ್ನನ್ನು ಕಾಡಿತ್ತು ಎಂದರು. ಆದಿವಾಸಿಗಳ ನಿರ್ದೇಶಕ ವೀಣಾ ಪ್ರಭು ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖಂಡರಾದ ವಕೀಲ ರಾಮಕೃಷ್ಣ ಮಾತನಾಡಿದರು.

ಸಭೆಯಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಎಚ್. ಡಿ.ದೇವೇಗೌಡ ಅವರ ಕುಟುಂಬದವರ ವಿರುದ್ಧ ಮಾತನಾಡುವ ವೇಳೆ ಜೆಡಿಎಸ್ ಮುಖಂಡ ಮನುಗನಹಳ್ಳಿ ಧಣಿ ಕುಮಾರ್ ನಿಮ್ಮ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ದುಡಿದಿದ್ದಾರೆ. ಆದರೆ, ನೀವು ಯಾವುದೇ ಸಭೆ ನಡೆಸದೆ ಕಾರ್ಯಕರ್ತರ ಗಮನಕ್ಕೆ ತರದೆ ರಾಜೀನಾಮೆ ನೀಡಿದಿರಿ ಎಂದು ಆದೇಶಿಸಿದಾಗ ಗೊಂದಲ ಉಂಟಾಯಿತು.ವಿಶ್ವನಾಥ್ ಬೆಂಬಲಿಗರು ಹಾಗೂ ಧಣಿ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ವಿಶ್ವನಾಥ್ ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಮತದಾರರು ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಸಭೆ ಕರೆದು ತಿಳಿಸದೆ ರಾಜೀನಾಮೆ ನೀಡಿದ್ದು ಅಪರಾಧವಾಗಿದೆ. ಆದರೆ, ಆ ವೇಳೆ ಸಭೆ ಕರೆಯುವ ಪರಿಸ್ಥಿತಿ ಇರಲಿಲ್ಲ. ಇದಕ್ಕಾಗಿ ಕ್ಷೇತ್ರದ ಜನರ ಕ್ಷಮೆ ಕೇಳುತ್ತೇನೆ. ಕುಮಾರಸ್ವಾಮಿಯವರು ನನ್ನನ್ನು ಗೆಲ್ಲಿಸಿದ್ದು ಎಂದಿದ್ದಾರೆ. ಇದು ಸರಿಯಲ್ಲ, ಜಿ.ಟಿ.ದೇವೇಗೌಡ, ಚಿಕ್ಕಮಾದು ಹಾಗೂ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿದ್ದು ಎಂದು ಹೇಳಿದರು.

ಚುನಾವಣೆ ನಂತರ ಬಿಜೆಪಿ ಜತೆ ಜೆಡಿಎಸ್ ಸರ್ಕಾರ ರಚಿಸುವ ಬಗ್ಗೆ ನಾನು ಕುಮಾರಸ್ವಾಮಿ ಮಾತನಾಡಿಕೊಂಡಿದ್ದೆವು. ಆದರೆ, ಫಲಿತಾಂಶದ ನಂತರ ಕಾಂಗ್ರೆಸ್ಸಿಗರು ಮೇಲೆ ಬಿದ್ದು ಕಾಂಗ್ರೆಸ್ ಜತೆ ಸರ್ಕಾರ ರಚಿಸುವಂತಾಯಿತು ಎಂದು ಸ್ಪಷ್ಟನೆ ನೀಡಿದರು.

ದಸಂಸ ಮುಖಂಡ ಹರಿಹರನ್ ಸ್ವಾಮಿ, ನಿಂಗಾಮಲ್ಲಾಡಿ, ಗಣೇಶ್ ಕುಮಾರಸ್ವಾಮಿ, ಅಣ್ಣನಾಯಕ, ಎ.ಪಿ.ಸ್ವಾಮಿ, ಕಾರ್ಯದರ್ಶಿ ಲೋಕೇಶ್, ಬ್ಯಾಂಕ್ ಅಧ್ಯಕ್ಷ ದೇವರಾಜು, ಜಿಪಂ ಮಾಜಿ ಸದಸ್ಯ ಕುನ್ನೇಗೌಡ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Facebook Comments