ಶಾಸಕ ವಿಶ್ವನಾಥ್ ಹತ್ಯೆ ಸಂಚು ಪ್ರಕರಣ : ಗೋಪಾಲಕೃಷ್ಣ ವಿಚಾರಣೆಗೆ ಬಾರದಿದ್ದರೆ ಕಾನೂನು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆ ಸಂಚು ಪ್ರಕರಣಕ್ಕೆ ಸಂಭಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ಅವರು ವಿಚಾರಣೆಗೆ ಬಾರದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೋಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಕರಣ ದಾಖಲಾಗುತ್ತಿದ್ದಂತೆ ಈ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಗೋಪಾಲ ಕೃಷ್ಣ ಅವರಿಗೆ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ವಿವರಿಸಿದರು.

ಈತನಕ ಅವರು, ರಾಜಾನುಕುಂಟೆ ಪೋಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗಿಲ್ಲ. ಸಂಜೆ ತನಕ ನೋಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಈಗಾಗಲೇ ಕುಳ್ಳ ದೇವರಾಜ್ ಎಂಬಾತನನ್ನು ಬಂಧಿಸಿದ್ದೇವೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚಿನ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾಗಿವೆ. ಆತ ಹೇಳಿದ ಪ್ರತಿಯೊಂದು ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ನಿನ್ನೆ ಠಾಣೆಗೆ ಹಾಜರಾಗಿದ್ದ ಶಾಸಕ ವಿಶ್ವನಾಥ್ ಅವರು ಕೆಲವು ಮಹತ್ವದ ವಿಷಯಗಳನ್ನು ತಿಳಿಸಿ, ಕೆಲ ದಾಖಲೆಗಳನ್ನು ನೀಡಿದ್ದಾರೆ. ಅವುಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಗೋಪಾಲ ಕೃಷ್ಣ ಹಾಗೂ ಕುಳ್ಳ ದೇವರಾಜ್ ನಡುವೆ ನಡೆದಿದೆ ಎನ್ನಲಾದ ವಿಡಿಯೋ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ಆಂಧ್ರದ ಶಾರ್ಪ್ ಶೂಟರ್ ಯಾರು ? ಅವರುಗಳನ್ನು ಯಾರು ಸಂಪರ್ಕಿಸಿದರು. ಯಾವ ಹೋಟೇಲ್‍ನಲ್ಲಿ ತಂಗಿದ್ದರು ಇತ್ಯಾದಿ ವಿಷಯಗಳ ಬಗ್ಗೆ ವಿಷೇಶ ತಂಡ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಪಾರದರ್ಶಕವಾಗಿ ನಡೆಸುತ್ತಿದ್ದೇವೆ. ತಪ್ಪಿತಸ್ತರು ಯಾರೇ ಆಗಿದ್ದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಮುಲಾಜಿಗೂ ಒಳಗಾಗುವುದಿಲ್ಲ ಎಂದು ಹಿರಿಯ ಅಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Facebook Comments