ಪ್ರಣಬ್, ಅಶೋಕ್ ಗಸ್ತಿ ಸೇರಿದಂತೆ ಅಗಲಿದ 15 ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, 15ನೆ ವಿಧಾನಸಭೆಯ ಸದಸ್ಯರಾಗಿದ್ದ ಸತ್ಯನಾರಾಯಣ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಸೇರಿದಂತೆ 15 ಮಂದಿ ಗಣ್ಯರಿಗೆ ಉಭಯ ಸದನಗಳಲ್ಲಿಂದು ಸಂತಾಪ ಸೂಚಿಸಲಾಯಿತು. ವಿಧಾನಸಭೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‍ನಲ್ಲಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಸಂತಾಪ ಸೂಚಕ ನಿರ್ಣಯಗಳನ್ನು ಮಂಡಿಸಿದರು.

ಪ್ರಣಬ್ ಮುಖರ್ಜಿ ಅವರು ನಡೆದಾಡುವ ವಿಶ್ವಕೋಶ ಎಂದೇ ಹೆಸರು ಗಳಿಸಿದ್ದರು. ಸಂಭಾವಿತ ರಾಜಕಾರಣಿ, ಪಶ್ಚಿಮ ಬಂಗಾಳದ ಮೀರತ್‍ನಲ್ಲಿ ಜನಿಸಿ, ಕೋಲ್ಕತ್ತಾ ವಿವಿಯಿಂದ ಇತಿಹಾಸ, ಕಾನೂನು ಪದವಿ ಪಡೆದು ಉಪನ್ಯಾಸಕ, ಪತ್ರಕರ್ತರಾಗಿ ಕೆಲಸ ಮಾಡಿದ್ದರು. 1969ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ 1970ರಲ್ಲಿ 1981, 1993, 1999ರಲ್ಲಿ ಪುನರಾಯ್ಕೆಗೊಂಡಿದ್ದರು. 2004-2009ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು.

1973ರಿಂದ 2012ರ ವರೆಗೂ ಹಣಕಾಸು, ವಿದೇಶಾಂಗ ಸೇರಿದಂತೆ ಕೇಂದ್ರದಲ್ಲಿ ನಾನಾ ಖಾತೆಗಳನ್ನು ನಿಭಾಯಿಸಿದ್ದರು. 1980-85ರ ವರೆಗೆ ರಾಜ್ಯಸಭಾ ನಾಯಕರಾಗಿ, 2004ರಿಂದ 2017ರ ವರೆಗೆ ಲೋಕಸಭಾ ನಾಯಕರಾಗಿ, 2012-2013ರ ವರೆಗೆ ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದರು. 10ಕ್ಕೂ ಹೆಚ್ಚು ಪುಸ್ತಕ ಬರೆದಿದ್ದ ಇವರು ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ತುಮಕೂರು ಜಿಲ್ಲಾ ಶಿರಾ ಶಾಸಕ ಸತ್ಯನಾರಾಯಣ ಅವರು 1994, 2004, 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

1996ರಲ್ಲಿ ಕಾರ್ಮಿಕ, 1999ರಲ್ಲಿ ಸಣ್ಣ ಉಳಿತಾಯ ಮತ್ತು ಲಾಟರಿ, 2004ರಲ್ಲಿ ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ಸಚಿವರಾಗಿ, 2019ರಲ್ಲಿ ಕೆಎಸ್‍ಆರ್‍ಟಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗಷ್ಟೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಅವರು 2012ರಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಎಂ.ವಿ.ರಾಜಶೇಖರನ್ ಅವರು ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿ ಕಾನೂನು ಪದವೀಧರರಾಗಿದ್ದರು. 1967 ರಿಂದ 1970ರ ವರೆಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಕೇಂದ್ರ ಸಂಪುಟ ಸಚಿವರಾಗಿದ್ದರು. ಗ್ರಾಮೀಣಾಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿದ್ದರು.  ಸುರಪುರ ಕ್ಷೇತ್ರದ ಶಾಸಕರಾಗಿದ್ದ ರಾಜ ಮದನಗೋಪಾಲ ನಾಯಕ ಬಿಎ ಪದವೀಧರರಾದ ಅವರು 1983ರಲ್ಲಿ 1985, 1989ರಲ್ಲಿ ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿದ್ದರು. ಸಣ್ಣ ಉಳಿತಾಯ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು.

ಮಾಜಿ ಸಚಿವ ರಾಮಕೃಷ್ಣ ಅವರು 1985ರಲ್ಲಿ ಕಮಲಾಪುರ ಕ್ಷೇತ್ರದಿಂದ ಶಾಸಕರಾಗಿದ್ದರು. 1989ರಲ್ಲಿ ಪುನರಾಯ್ಕೆಗೊಂಡಿದ್ದ ಇವರು 2013ರಲ್ಲಿ ಗುಲ್ಬರ್ಗಾ ಗ್ರಾಮಾಂತರ ಕ್ಷೇತ್ರದಿಂದ ಮತ್ತೆ ಆಯ್ಕೆಗೊಂಡಿದ್ದರು. ರಾಜ ರಂಗಪ್ಪನಾಯಕ ಅವರು 1996ರಲ್ಲಿ 11ನೆ ಲೋಕಸಭೆಗೆ ರಾಯಚೂರಿನಿಂದ ಚುನಾಯಿತರಾಗಿದ್ದರು. ರತನ್‍ಸಿಂಗ್ 1991ರಲ್ಲಿ ಹೊಸಪೇಟೆ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು.

ವಿನ್ನಿಫ್ರೆಡ್ ಫರ್ನಾಂಡಿಸ್ ಅವರು 1967ರಲ್ಲಿ ಕುಂದಾಪುರ ಕ್ಷೇತ್ರದಿಂದ ಆಯ್ಕೆಯಾಗಿ 1973ರಲ್ಲಿ ಪುನರಾಯ್ಕೆಯಾಗಿ 2005ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಚಾಮರಾಜ ಕ್ಷೇತ್ರದಿಂದ 1999ರಲ್ಲಿ ಆಯ್ಕೆಯಾಗಿದ್ದ ಗುರುಸ್ವಾಮಿ, ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಜಿ.ಅಪ್ಪಾಜಿಗೌಡ, ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶರಾದ ಕೇಶವಾನಂದ ಭಾರತಿ ಸ್ವಾಮೀಜಿ, ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್, ಉಭಯ ಗಾನ ವಿದುಷಿ ಶಾಮಲಾ ಜಿ.ಭಾವೆ ಸೇರಿದಂತೆ ಇತ್ತೀಚೆಗೆ ನಿಧನರಾದ 15 ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.

ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರು, ಕೊರೊನಾದಿಂದ ಮೃತರಾದ ಸಾವಿರಾರು ಮಂದಿ, ಮಳೆಯಿಂದ ಪ್ರಾಣ ಕಳೆದುಕೊಂಡ ಹಲವಾರು ಮಂದಿಗೆ ಸದನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Facebook Comments