20 ದಿನದೊಳಗೆ ವಿಸ್ಟ್ರಾನ್ ಕಾರ್ಖಾನೆ ಪುನರಾರಂಭ : ಸಚಿವ ಹೆಬ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಡಿ.28- ವಿಸ್ಟ್ರಾನ್ ಕಾರ್ಖಾನೆಯು ಮುಂದಿನ 20 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಪ್ರಾರಂಭಿಸಿ ಯಥಾಸ್ಥಿತಿಯಲ್ಲಿ ಉತ್ಪಾದನೆ ಪ್ರಾರಂಭಿಸುವುದು ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ನರಸಾಪುರದ ವಿಸ್ಟ್ರಾನ್ ಕಾರ್ಖಾನೆಗೆ ಭೇಟಿ ನೀಡಿ ಕಂಪನಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಖಾನೆಯಲ್ಲಿ ನಡೆದಿದ್ದ ಪ್ರಕರಣದ ಕುರಿತು ಮಾಹಿತಿ ಪಡೆದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಪೂರ್ಣ ಪ್ರಮಾಣದ ಮಾಹಿತಿ ದೊರೆತಿಲ್ಲ.ಮುಂದಿನವಾರ ವಿಕಾಸಸೌಧದಲ್ಲಿ ಸಭೆ ನಡೆಸಿ ಗಲಭೆಗೆ ನಿಖರ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೈಗಾರಿಕಾ ಸರಳೀಕರಣ ನೀತಿಯನ್ನು ಜಾರಿಗೆ ತಂದಿದ್ದು, ಇದರಿಂದ ಹೆಚ್ಚಿನ ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿ ಹೆಚ್ಚು ಉದ್ಯೋಗಗಳು ಸ್ಥಳೀಯರಿಗೆ ದೊರೆಯುತ್ತವೆ. ಸರ್ಕಾರವು ಕೈಗಾರಿಕಾ ಸ್ನೇಹಿ ಹಾಗೂ ಉದ್ಯೋಗಿ ಸ್ನೇಹಿಯಾಗಿದೆ. ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಸೂಕ್ತ ವೇತನ ದೊರೆಯುವಂತೆ ನೋಡಿಕೊಳ್ಳಲಾಗುವುದು.

ಮ್ಯಾನೇಜ್ಮೆಂಟ್ ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಕಾರ್ಮಿಕ ಇಲಾಖೆ ಬದ್ಧವಾಗಿದೆ. ಕಾರ್ಮಿಕರಿಗೆ ನೀಡಬೇಕಾದ ಪೂರ್ಣ ವೇತನವನ್ನು ಕೊಡಿಸಲಾಗುವುದು ಎಂದು ಅವರು ತಿಳಿಸಿದರು. ವಿಸ್ಟ್ರಾನ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸಂಬಳ ನೀಡದಿರುವ ಕುರಿತು, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಅಥವಾ ಜನಪ್ರತಿನಿಧಿಗಳ ಗಮನಕ್ಕೆ ಮಾಹಿತಿ ನೀಡಿರಲಿಲ್ಲ.

ಮಾಹಿತಿ ಗೊತ್ತಿದ್ದರೆ ಈ ರೀತಿ ಘಟನೆ ನಡೆಯಲು ಅವಕಾಶ ನೀಡುತ್ತಿರಲಿಲ್ಲ. ಈಗಾಗಲೇ ಕಾರ್ಖಾನೆಯ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿದ್ದು, ಗಲಭೆಯಲ್ಲಿ ನೇರವಾಗಿ ಭಾಗಿಯಾಗಿರುವರನ್ನು ಹೊರತುಪಡಿಸಿ, ಉಳಿದ ನಿರಪರಾಧಿಗಳಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಟೊಯೋಟಾ ಕಾರ್ಖಾನೆಯು ಕಳೆದ 26 ದಿನಗಳಿಂದ ಬಂದಾಗಿತ್ತು. ಈ ಸಂಬಂಧ ಸಭೆಗಳನ್ನು ನಡೆಸಿ ಕಾರ್ಖಾನೆಯ ಮೊದಲ ಪಾಳಿಯು ಪ್ರಾರಂಭವಾಗಿದೆ. ಮುಂದಿನ 10 ದಿನಗಳಲ್ಲಿ ಎರಡನೇ ಪಾಳಿಯು ಪ್ರಾರಂಭವಾಗುವ ಭರವಸೆ ಇದೆ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದರು.

ಸಚಿವ ಹೆಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments