ಟ್ರ್ಯಾಕ್ಟರ್-ಬುಲೆರೋ ಡಿಕ್ಕಿ, ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ಐವರು ಭಕ್ತರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ನ.8- ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಮತ್ತು ಬುಲೆರೋ ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ಮೂಲದ ಐವರು ಧಾರುಣವಾಗಿ ಸಾವನ್ನಪ್ಪಿ, 7 ಜನ ಗಾಯಗೊಂಡಿರುವ ಘಟನೆ ಇಂದು ನಸುಕಿನ ಜಾವ ಮಹಾರಾಷ್ಟ್ರದ ಸಾಂಗ್ಲಿ ಬಳಿ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದವರಾದ ಕೃಷ್ಣ ವಾಮನ ಗಾಂವ್ಕರ (50), ಮಹಾದೇವ ಕಣಬರಕರ (48), ಬಾಳು ಅಂಬೇವಾಡಿಕರ (50), ಅರುಣ ದತ್ತು ಮುತಗೇಕರ (38) ಹಾಗೂ ಹಂಗರಗಾ ಗ್ರಾಮದ ಚಾಲಕ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ವಾಹನದಲ್ಲಿದ್ದ ಇನ್ನೂ ಏಳು ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಬುಲೇರೋ ಟೆಂಪೋದಲ್ಲಿ ಬೆಳಗಾವಿಯ ಮಂಡೋಳಿಯಿಂದ ನಿನ್ನೆ ರಾತ್ರಿ ವಾಹನದಲ್ಲಿ ಇವರೆಲ್ಲರೂ ಕಾರ್ತಿಕ ಏಕಾದಶಿಗೆ ವಿಠ್ಠಲನ ದರ್ಶನ ಪಡೆಯಲು ಪಂಢರಪುರಕ್ಕೆ ತೆರಳುತ್ತಿದ್ದರು.

ಇವರು ರಾತ್ರಿಯಿಡೀ ಪ್ರಯಾಣದಲ್ಲಿ ಇದ್ದರು. ಸಾಂಗೋಲ್ಯಾದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಹೋಗುತ್ತಿದ್ದಾಗ ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‍ಗೆ ಹಿಂದಿನಿಂದ ಬಂದ ಬುಲೇರೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತಕ್ಕೆ ಐವರು ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಸ್ಥಳೀಯ ನಾಗರಿಕರು ತೀವ್ರ ಪ್ರಯಾಸಡಬೇಕಾಯಿತು.

ಒಟ್ಟಾರೆ, ಇವರೆಲ್ಲರೂ ದೇವರ ದರ್ಶನ ಪಡೆಯುವ ಮೊದಲೇ ಅಪಘಾತಕ್ಕೆ ತುತ್ತಾಗಿರುವುದು ಮಾತ್ರ ದುರಂತ. ಸುದ್ದಿ ತಿಳಿಯುತ್ತಿದ್ದಂತೆ ಮಂಡೋಳಿ ಮತ್ತು ಹಂಗರಗಾ ಗ್ರಾಮಗಳಲ್ಲಿ ಸೂತಕದ ಛಾಯೆ ಆವರಿಸಿತ್ತು. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments