ಒಕ್ಕಲಿಗರ ಸಂಘಕ್ಕೆ ಮೇ.16ರಂದು ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.9- ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ಘೋಷಣೆಯಾಗಿದೆ. ಸಂಘದ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಅವರು, ಚುನಾವಣೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಮೇ 16ರಂದು 11 ಜಿಲ್ಲಾ ಕ್ಷೇತ್ರಗಳಿಂದ 35 ಮಂದಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಮುಂದಿನ 5 ವರ್ಷಗಳ ಅವಧಿಗೆ 35 ಮಂದಿ ಕಾರ್ಯಕಾರಿ ಸದಸ್ಯರನ್ನು ಸಂಘದ ಸದಸ್ಯರು ಆಯ್ಕೆ ಮಾಡಬೇಕಿದೆ. ಕಳೆದ ಮೂರು ವರ್ಷಗಳಿಂದಲೂ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಾ ಬಂದಿದೆ.

ತಮಿಳುನಾಡಿನ ಹೊಸೂರು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಕ್ಷೇತ್ರದಿಂದ 15 ಸದಸ್ಯರು, ತಮಿಳುನಾಡಿನ ಊಟಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಕ್ಷೇತ್ರದಿಂದ ಮೂರು ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಮಂಡ್ಯ ಜಿಲ್ಲೆ 4, ಹಾಸನ 3, ತುಮಕೂರು 2, ದಾವಣಗೆರೆ, ಗದಗ, ಹುಬ್ಬಳ್ಳಿ ಸೇರಿದಂತೆ ಚಿತ್ರದುರ್ಗ ಜಿಲ್ಲೆಯಿಂದ ಒಬ್ಬರು ಸದಸ್ಯರನ್ನು ಚುನಾಯಿಸಬೇಕಿದೆ.

ಅಂಧ್ರಪ್ರದೇಶ ಸೇರಿದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರದಿಂದ 3, ಕಾಸರಗೋಡು ಸೇರಿದಂತೆ ದಕ್ಷಿಣಕನ್ನಡ- ಉಡುಪಿ ಜಿಲ್ಲೆಯಿಂದ 1, ಕೊಡುಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯಿಂದ ತಲಾ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈಗಾಗಲೇ ಸ್ಪರ್ಧಾಕಾಂಕ್ಷಿಗಳು ಸಂಘದ ಸದಸ್ಯರನ್ನು ಸಂಪರ್ಕಿಸಿ ಮತಯಾಚಿಸತೊಡಗಿದ್ದಾರೆ. ಬೇರೆ ಬೇರೆ ತಂಡಗಳನ್ನು ಮಾಡಿಕೊಂಡು ಬೆಂಗಳೂರಿನಿಂದ ಸ್ಪರ್ಧಿಸಲು ಸಿದ್ದತೆ ನಡೆದಿದೆ.

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಂದೇಶಗಳನ್ನು ಸ್ಪರ್ಧಾಕಾಂಕ್ಷಿಗಳು ಸಂಘದ ಸದಸ್ಯರಿಗೆ ತಲುಪಿಸುತ್ತಿದ್ದಾರೆ. ಈ ಬಾರಿಯೂ ಸಂಘದ ಚುನಾವಣೆ ಕಾವು ತಾರಕಕ್ಕೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

Facebook Comments