ಒಕ್ಕಲಿಗರ ಸಂಘದ ಚುನಾವಣೆ ಮೇಲೆ ಕೊರೊನಾ ಕರಿನೆರಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸದಸ್ಯರ ಆಯ್ಕೆಗೆ ಸಂಬಂಧಿಸಿದ ಚುನಾವಣೆ ಮೇಲೆ ಕೊರೊನಾ ಕರಿ ನೆರಳು ಆವರಿಸಿದೆ. ಮೇ 16ರಂದು ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೇ 21ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಬೇಕಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸ್ಪರ್ಧಾ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿದೆ. ಇದೇ ರೀತಿ ಕೊರೊನಾ ಸೋಂಕು ಹೆಚ್ಚುತ್ತಾ ಹೋದರೆ ಚುನಾವಣಾ ಪ್ರಚಾರ ಮಾಡುವುದಾದರೂ ಹೇಗೆ? ಮತದಾರರನ್ನು ಸಂಪರ್ಕಿಸುವುದು ಹೇಗೆ? ಮತದಾನ ಮಾಡಲು ಸಂಘದ ಸದಸ್ಯರು ಮುಂದೆ ಬರುತ್ತಾರ ಎಂಬುದು ಸೇರಿದಂತೆ ಹಲವು ಗೊಂದಲದಲ್ಲಿ ಆಕಾಂಕ್ಷೆಗಳು ಮುಳುಗಿದ್ದಾರೆ.

ಈ ನಡುವೆ ತಂಡಗಳ ಮೂಲಕ ಚುನಾವಣಾ ಕಣಕ್ಕಿಳಿಯಲು ಸಿದ್ದತೆ ಕೂಡ ನಡೆದಿದೆ. ಬಹಳಷ್ಟು ಮಂದಿ ಯಾವುದೇ ತಂಡದ ಜೊತೆ ಸೇರದೆ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದ್ದು, ಎಸ್‍ಎಂಎಸ್ ಸಂದೇಶ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. 11 ಜಿಲ್ಲೆಗಳ ಕ್ಷೇತ್ರಗಳಿಂದ ಸಂಘಕ್ಕೆ ಒಟ್ಟು 35 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಐದು ವರ್ಷಗಳ ಅಧಿಕಾರ ಅವಧಿಯುಳ್ಳ ಈ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಲು ತೀವ್ರ ಪೈಪೋಟಿ ಏರ್ಪಡುವುದು ನಿಶ್ಚಿತ.

ಅದರಲ್ಲೂ 15 ಸದಸ್ಯರನ್ನು ಆಯ್ಕೆ ಮಾಡಬೇಕಿರುವ ಬೆಂಗಳೂರು ಜಿಲ್ಲಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆ ಕಂಡುಬರಲಿದೆ. ಕೊರೊನಾ ಸೋಂಕಿನಿಂದಾಗಿ ಪ್ರಚಾರದ ವೈಖರಿಯನ್ನು ಬದಲಾವಣೆ ಮಾಡಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಬಳಕೆ ಮಾಡಿಕೊಳ್ಳಲಿದ್ದಾರೆ. ಈ ಕ್ಷೇತ್ರದಲ್ಲಿ ಈಗಾಗಲೇ ಹಲವು ಸ್ಪರ್ಧಾಕಾಂಕ್ಷಿಗಳು ಸಂಘದ ಸದಸ್ಯರನ್ನು ಸಂಪರ್ಕಿಸಿ ಮತಯಾಚನೆ ಮಾಡತೊಡಗಿದ್ದಾರೆ. ಮಾಜಿ ನಿರ್ದೇಶಕರು, ಪದಾಧಿಕಾರಿಗಳು ಸೇರಿದಂತೆ ನಾಲ್ಕೈದು ತಂಡಗಳು ರಚನೆಯಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಈಗಾಗಲೇ ಕೆಲವು ತಂಡಗಳು ರಚನೆಯಾಗಿದ್ದು, ಇನ್ನು ಕೆಲವು ತಂಡಗಳ ರಚನೆಯ ಸಿದ್ದತೆ ನಡೆದಿದೆ. ಕೊರೊನಾ ಸೋಂಕು ಉಲ್ಬಣದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಬಹುದೇ ಎಂಬ ಅನುಮಾನದಲ್ಲೂ ಕೆಲವರು ಇದ್ದಾರೆ. ಆದರೆ ಸಂಘದ ಚುನಾವಣಾಧಿಕಾರಿಯಿಂದ ಮುಂದೂಡಿಕೆಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಚುನಾವಣಾ ದಿನಾಂಕ ಹಾಗೂ ವೇಳಾಪಟ್ಟಿ ಕೂಡ ಪ್ರಕಟವಾಗಿದೆ.

Facebook Comments