ಡಿಕೆಶಿ ಬಂಧನ ಖಂಡಿಸಿ ಸಿಡಿದೆದ್ದ ಒಕ್ಕಲಿಗ ಸಮುದಾಯ, ಪ್ರತಿಭಟನೆಗೆ ಹರಿದು ಬಂದ ಜನಸಾಗರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ಖಂಡಿಸಿ ಒಕ್ಕಲಿಗರ ಸಮುದಾಯ ಇಂದು ಕರೆ ನೀಡಿದ್ದ ರಾಜಭವನ್ ಚಲೋ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದುಬಂದಿತು. ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಫ್ರೀಡಂ ಪಾರ್ಕ್‍ವರೆಗೂ ಮೆರವಣಿಗೆಯಲ್ಲಿ ಆಗಮಿಸಿದರು.

ಕನ್ನಡಪರ ಸಂಘಟನೆಗಳು, ಒಕ್ಕಲಿಗ ಸಮುದಾಯದ ಹಲವಾರು ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.  ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ವಿನೂತನ ಪ್ರತಿಭಟನೆಗಳು ನಡೆದಿದ್ದು, ಇಂದು ಬಹಳಷ್ಟು ಸಂಖ್ಯೆಯಲ್ಲಿ ಜನ ಬೆಂಗಳೂರಿಗೆ ಆಗಮಿಸಿ ರಾಜಭವನ ಚಲೋದಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆದ ಹಾದಿಯುದ್ದಕ್ಕೂ ಅಂಗಡಿಮುಗ್ಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದವು.  ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಬಂಧನದ ಹಿಂದೆ ರಾಜಕೀಯ ದುರದ್ದೇಶವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  ನಗರದ ರಾಜಾಜಿನಗರದಿಂದ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು 110 ವಾಹನಗಳಲ್ಲಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿ ನಂತರ ಫ್ರೀಡಂಪಾರ್ಕ್‍ವರೆಗೂ ರ್ಯಾಲಿಯಲ್ಲಿ ಆಗಮಿಸಿದರು.

ಡಿ.ಕೆ.ಶಿವಕುಮಾರ್ ಜನನಾಯಕರಾಗಿದ್ದು, ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು. ಜಾತ್ಯತೀತ ವ್ಯಕ್ತಿಯಾದ ಅವರನ್ನು ರಾಜಕೀಯವಾಗಿ ತುಳಿಯಲು ಜಾರಿ ನಿರ್ದೇಶನಾಲಯ(ಇಡಿ)ವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಪ್ರತಿಭಟನಿರತರು ಆರೋಪಿಸಿದರು.  ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅದರಲ್ಲೂ ಹಳೇಮೈಸೂರು ಭಾಗದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ವ್ಯಕ್ತವಾಗಿತ್ತು.

ಕಾಂಗ್ರೆಸ್ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದರಿಂದ ವಿವಿಧ ಬ್ಲಾಕ್ ಕಾಂಗ್ರೆಸ್ ಮಟ್ಟದಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದರಿಂದ ನಗರದಲ್ಲಿ ಸಂಚಾರಿ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.  ಏಕಾಏಕಿ ಸಾವಿರಾರು ವಾಹನಗಳು ಆಗಮಿಸಿ ಜನಸಾಗರ ಜಮಾವಣೆಗೊಂಡಿದ್ದರಿಂದ ಬಹುತೇಕ ಬೆಂಗಳೂರು ಸಂಚಾರ ದಟ್ಟಣೆಯಿಂದ ನಲುಗಿಹೋಗಿತ್ತು.

ಮುಂಜಾಗ್ರತಾ ಕ್ರಮವಾಗಿ ಸುಮಾರು 2000ಕ್ಕೂ ಹೆಚ್ಚುಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಲವಂತವಾಗಿ ಯಾವುದೇ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿಸಬಾರದೆಂದು ಪೊಲೀಸರು ಸೂಚನೆ ನೀಡಿದ್ದರು.  ಮೆರೆವಣಿಗೆಯ ಉದ್ದಕ್ಕೂ ಪೊಲೀಸರ ಸರ್ಪಗಾವಲು ನಿಯೋಜಿಸಲಾಗಿತ್ತು.  ಫ್ರೀಡಂಪಾರ್ಕ್ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Facebook Comments

Sri Raghav

Admin