‘ವಿಶ್ವಾಸ’ ನಾಟಕ ಸೋಮವಾರಕ್ಕೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಜು.20 : ಶುಕ್ರವಾರವೇ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಎರಡನೇ ಬಾರಿ ಸೂಚನೆ ಕೊಟ್ಟರೂ, ಆಡಳಿತ ಪಕ್ಷದ ಸದಸ್ಯರು ಚರ್ಚೆಗೆ ಪಟ್ಟು ಹಿಡಿದ ಪರಿಣಾಮ ಬಹುನಿರಿಕ್ಷೀತ ವಿಶ್ವಾಸಮತಯಾಚನೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇದೇ ವೇಳೆ ಆಡಳಿತ ಪಕ್ಷ ಸೋಮವಾರ ವಿಶ್ವಾಸಮತಯಾಚಿಸಲು ಸಮ್ಮತಿ ಸೂಚಿಸಿದೆ.

ತೀವ್ರ ಹಗ್ಗಜಗ್ಗಾಟ ಹಾಗೂ ಆಡಳಿತ ಪಕ್ಷದ ವಿಳಂಬ ತಂತ್ರದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.
ಕಲಾಪ ಮುಕ್ತಾಯಗೊಳ್ಳುತ್ತಿದ್ದಂತೆ ಎಲ್ಲಾ ಶಾಸಕರು ಮತ್ತೆ ರೆಸಾರ್ಟ್‌ಗೆ ತೆರಳಿದರು.  ಶುಕ್ರವಾರವೇ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ಇದಕ್ಕೆ ಜಗ್ಗದ ಮೈತ್ರಿ ಸರ್ಕಾರವು ಕೊನೆಗೂ ಸೋಮವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದೆ.

ಈ ಮೂಲಕ ದೋಸ್ತಿ ಸರ್ಕಾರಕ್ಕೆ ಇನ್ನು ಎರಡು ದಿನ ಜೀವದಾನ ಸಿಕ್ಕಿದೆ. ಸೋಮವಾರ 11 ಗಂಟೆಗೆ ಸದನವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್, ಎಲ್ಲದ್ದಕ್ಕೂ ಸೋಮವಾರವೇ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ. ಇದೀಗ ಸರ್ಕಾರ ಉಳಿಸಿಕೊಳ್ಳಲು ಕಡೆ ಪ್ರಯತ್ನ ನಡೆಸುತ್ತಿರುವ ದೋಸ್ತಿಗಳಿಗೆ ಶನಿವಾರ ಮತ್ತು ಭಾನುವಾರ ನಿರ್ಣಾಯಕ ದಿನವಾಗಿದ್ದು, ಪವಾಡ ನಡೆದರೆ ಮಾತ್ರ ಸರ್ಕಾರ ಉಳಿಯಬಹುದು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ವಿಶ್ವಾಸಮತ ಯಾಚನೆಯನ್ನು ಮುಂದೂಡಬೇಕು ಅಥವಾ ಇದರಿಂದ ಫಲಾಯನ ಮಾಡಬೇಕು ಎನ್ನುವ ಉದ್ದೇಶ ನಮ್ಮದಲ್ಲ. ಮಾನ್ಯ ಸದಸ್ಯರ ಹಕ್ಕುಗಳು ಮೊಟಕಾಗಬಾರದು ಎನ್ನುವ ಕಾರಣಕ್ಕಾಗಿ ಎಂದರು. ಇದಕ್ಕೆ ಸ್ಪೀಕರ್‌ ಹಾಗಾದರೆ ಯಾವಾಗ ಇದು ಮುಗಿಯುತ್ತದೆ ಎಂದು ಕೇಳಿದ್ದಕ್ಕೆ ಸೋಮವಾರ ಎಲ್ಲದಕ್ಕೂ ತೆರೆ ಎಳೆಯೋಣ ಎಂದು ಹೇಳಿದರು.

ಸೋಮವಾರಕ್ಕೆ ಇದನ್ನು ಇತಿಶ್ರೀ ಹಾಡಬೇಕಾಗುತ್ತದೆ. ಹಾಗಾಗಿ ಸದನವನ್ನು ಇಲ್ಲಿಗೆ ಮುಂದೂಡಿ ನಾನು ಹೊರಡುತ್ತಿದ್ದೇನೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ತೆರಳಿದರು.  ಇದರ ನಡುವೆ ರಾಜ್ಯಪಾಲರು ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ನೀಡಿರುವ ಸೂಚನೆ ಹಾಗೂ ಅತೃಪ್ತ ಶಾಸಕರಿಗೆ ವಿಪ್ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಕುರಿತು ಕಾಂಗ್ರೆಸ್ ಮೇಲ್ಮನವಿಯನ್ನು ಸಲ್ಲಿಸಿದ್ದು, ಕಾನೂನು ನೆರವಿಗೆ ಬಂದರೆ ಮಾತ್ರ ದೋಸ್ತಿ ಸರ್ಕಾರ ಪತನದ ಭೀತಿಯಿಂದ ಪರಾಗಬಹುದು.

ಬುಧವಾರ ನೀಡಿದ ಆದೇಶದಲ್ಲಿ ಸದನಕ್ಕೆ ಬರಬೇಕೋ? ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರನ್ನು ಬಲವಂತವಾಗಿ ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂ ಹೇಳಿತ್ತು. ದೋಸ್ತಿ ನಾಯಕರು ವಿಪ್ ಜಾರಿಗೊಳಿಸುವ ಮೂಲಕ ಶಾಸಕರನ್ನು ಸದನಕ್ಕೆ ಬರುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಬಗ್ಗೆ ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.

ವಿಪ್ ಜಾರಿ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಅತೃಪ್ತರು ಸದನಕ್ಕೆ ಹಾಜರಾಗಬೇಕಿಲ್ಲ ಎಂಬ ಆದೇಶದಿಂದ ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಈ ಆದೇಶ 10ನೇ ಷೆಡ್ಯೂಲ್ ಅಡಿಯಲ್ಲಿ ಪಕ್ಷಕ್ಕೆ ನೀಡಲಾದ ಅಧಿಕಾರವನ್ನು ಕಿತ್ತುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೋರಿ ಅರ್ಜಿಯಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿಕೊಂಡಿದ್ದಾರೆ.

ಎರಡು ಬಾರಿ ಸೂಚನೆ ಕೊಟ್ಟರೂ ತಮ್ಮ ನಿದೇರ್ಶನ ಪಾಲನೆ ಮಾಡಿಲ್ಲ ಎಂದು ರಾಜ್ಯಪಾಲರು ಇದೀಗ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ನಿಂತಿದೆ. ಈಗಾಗಲೇ ರಾಜ್ಯಪಾಲರು ಸರ್ಕಾರದ ನಡಾವಳಿಗಳ ಬಗ್ಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗೆ ತುರ್ತು ವರದಿಯನ್ನು ಸಲ್ಲಿಸಿದ್ದಾರೆ.

# ಎರಡನೇ ಬಾರಿ ಡೆಡ್ ಲೈನ್ :
ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ವಿಶ್ವಾಸಮತ ಸಾಬೀತು ಪಡಿಸಲು ಮತ್ತೊಮ್ಮೆ ಸಮಯಾವಕಾಶವನ್ನು ನಿಗದಿ ಮಾಡಿದ್ದು, ಇಂದು ವಿಧಾನಸಭೆಯ ಕಲಾಪ ಪೂರ್ಣಗೊಳ್ಳುವ ಮುನ್ನ ವಿಶ್ವಾಸ ಮತಸಾಬೀತು ಪಡಿಸುವಂತೆ ಆದೇಶ ನೀಡಿದರು.
ರಾಜ್ಯಪಾಲರು ಸಿಎಂ ಅವರಿಗೆ ನೀಡುತ್ತಿರುವ 2ನೇ ಆದೇಶ ಇದಾಗಿದ್ದು, ಇಂದು ಮಧ್ಯಾಹ್ನ 1.30ರ ಒಳಗಡೆ ವಿಶ್ವಾಸ ಮತ ಸಾಬೀತು ಪಡಿಸಲು ನಿನ್ನೆ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಸರ್ಕಾರ ಪಾಲನೆ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸಿಎಂ ಪತ್ರವನ್ನು ಬರೆದು ವಿವರಣೆ ನೀಡಿದರು. ಸಿಎಂ ಅರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಮತ್ತೊಂದು ಡೆಡ್‍ಲೈನ್ ನೀಡಿರುವ ರಾಜ್ಯಪಾಲರು 2ನೇ ಬಾರಿಗೆ ಸಮಯಾವಕಾಶವನ್ನು ಕೊಟ್ಟರು. ಶುಕ್ರವಾರ ದಿನಪೂರ್ತಿ ನಡೆದ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾಪನೆ ಮೇಲೆ ಚರ್ಚೆ ನಡೆಯಿತು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ವಿಶೇಷ ಎಂದರೆ, ಪ್ರತಿ ಅಧಿವೇಶನದಲ್ಲಿ ಆರ್ಭಟಿಸುತ್ತಿದ್ದ ಪ್ರತಿಪಕ್ಷ ಬಿಜೆಪಿ ಸದಸ್ಯರು, ಆಡಳಿತ ಸದಸ್ಯರು ‌ಎಷ್ಟೇ ಟೀಕೆ , ವಾಗ್ಬಣ ಬಿಟ್ಡರೂ ಮೌನಕ್ಕೆ ಶರಣಾಗಿದ್ದರು. ನೀವು ನಮ್ಮನ್ನು ಎಷ್ಟೇ ಕೆಣಕಿದರೂ ನಾವು ಮಾತ್ರ ತುಟಿ ಬಿಚ್ಚುವುದಿಲ್ಲ ಎಂಬಷ್ಟರ ಮಟ್ಟಿಗೆ ಪ್ರತಿಪಕ್ಷದವರು ಶಾಂತಿ ಮಂತ್ರ ಪಠಿಸುತ್ತಿದ್ದರು.

ಇದರ ಸುಳಿವು ಅರಿತ ಕಾಂಗ್ರೆಸ್+ ಜೆಡಿಎಸ್ ಸದಸ್ಯರು ಕೆಲವು ಬಾರಿ ತಮ್ಮ ಕುರ್ಚಿಗಳನ್ನು ಬಿಟ್ಟು ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರೂ,ಪ್ರತಿಪಕ್ಷದವರು ಮಾತ್ರ ಜಪ್ಪಯ್ಯ ಎನ್ನಲಿಲ್ಲ.ಅವರು ನಿಮ್ಮನ್ನು ಎಷ್ಟೇ ಪ್ರಚೋದಿಸಿದರೂ, ಒಂದೇ ಒಂದು ಮಾತು ಕೂಡಾ ಮಾತನಾಡಬಾರದೆಂದು ಪಕ್ಷದ ಪ್ರಮುಖರು ಕಟ್ಡಾಜ್ಞೆ ವಿಧಿಸಿದ್ದರು.

ಶುಕ್ರವಾರ ಕೂಡ ನಡೆಸಿದ್ದು ಬರೀ ಕಾಲಹರಣ. ಸಮಯ ಮುಂದೂಡಿಕೆಗೆ ನಾಟಕದ ಮೇಲೆ ನಾಟಕ. ಒಮ್ಮೆ ಸ್ಪೀಕರ್‍ಗೂ, ಮಗದೊಮ್ಮೆ ಸಿಎಂಗೂ ಪತ್ರ ಬರೆದಿದ್ದ ರಾಜ್ಯಪಾಲರು ಇವತ್ತು ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚನೆ ಮುಗಿಸಬೇಕು ಎಂದು ಗುರುವಾರ ಆದೇಶಿಸಿದ್ದರು.

ಬೆಳಗ್ಗೆ ಕಲಾಪ ಆರಂಭವಾದಾಗ ರಾಜಭವನದ ವಿಶೇಷಾಧಿಕಾರಿ ಸದನಕ್ಕೆ ಆಗಮಿಸಿದ್ದರು.ಮಧ್ಯಾಹ್ನ 1:30 ಆದರೂ ವಿಶ್ವಾಸಮತ ಪ್ರಕ್ರಿಯೆ ಮುಗಿಯ ಕಾರಣ ರಾಜ್ಯಪಾಲರಿಗೆ ವರದಿ ನೀಡಿದರು. ವರದಿ ಆಧರಿಸಿ ಇವತ್ತು ಕಲಾಪ ಮುಗಿಯುವುದರ ಒಳಗಡೆ ವಿಶ್ವಾಸಮತ ಮುಗಿಸಲೇಬೇಕು ಅಂತ ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಂದು ಆದೇಶ ಪ್ರಕಟಿಸಿದರು.

ರಾಜ್ಯಪಾಲರ ಎರಡನೇ ಲವ್‍ಲೆಟರ್ ನೋವು ತಂದಿದೆ ಅಂತ ಸಿಎಂ ಹೇಳಿದರು. ಆದರೆ ಸಂಜೆಯಾದರೂ ಮುಗಿಯದ ಲಕ್ಷಣ ಕಾಣಲಿಲ್ಲ. ದೋಸ್ತಿ ಪಕ್ಷದ ಶಾಸಕರೆಲ್ಲರೂ ಸೋಮವಾರಕ್ಕೆ ಕಲಾಪ ಮುಂದೂಡಿ, ನಾವು ನಮ್ಮ ಕ್ಷೇತ್ರದ ಸಮಸ್ಯೆ ಆಲಿಸಬೇಕು ಅಂತ ಪ್ರಸ್ತಾಪ ಮುಂದಿಟ್ಟರು.

ಮುಖ್ಯಮಂತ್ರಿ ಅವರಂತೂ, ನಾನು ಇನ್ನಷ್ಟು ಮಾತನಾಡೋದಿದೆ. ಸೋಮವಾರ ವಿಶ್ವಾಸಮತ ಮುಗಿಸಿಬಿಡೋಣ ಎಂದರು.
ಇದಕ್ಕೆ ಸಿದ್ದರಾಮಯ್ಯ ಕೂಡ ದನಿಗೂಡಿಸಿದರು. ಆದರೆ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಮುಂದೂಡಬೇಡಿ. ಇವತ್ತೇ ವಿಶ್ವಾಸಮತ ಪ್ರಕ್ರಿಯೆ ಮುಗಿಸಿಬಿಡಿ. ಇಲ್ಲದಿದ್ದರೆ, ವಿಶ್ವಾಸಮತ ಪ್ರಕ್ರಿಯೆ ಬಗ್ಗೆ ಅನುಮಾನ ಬರಲಿದೆ ಅಂತ ಸಂಶಯ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಬಿಎಸ್‌. ಯಡಿಯೂರಪ್ಪ ಮಾತನಾಡಿ, ರಾತ್ರಿ 12 ಗಂಟೆಯಾದರೂ ನಾವು ಕುಳಿತುಕೊಳ್ಳಲು ಸಿದ್ಧ. ಬಹುಮತ ಸಾಬೀತುಪಡಿಸಲು ಅವಕಾಶ ಮಾಡಿಕೊಡಿ. ನಾವು ಯಾರೂ ಮಾತನಾಡುವುದಿಲ್ಲ ಎಂದು ಮನವಿ ಮಾಡಿದರು. ಬಿಜೆಪಿ ಶಾಸಕ ಬಸವರಾಜ್‌ ಬೊಮ್ಮಾಯಿ ಮಾತನಾಡಿ, ವಿಶ್ವಾಸಮತಯಾಚನೆ ಚರ್ಚೆ ಒಂದೇ ದಿನದಲ್ಲಿ, ಒಂದೆರಡು ದಿನದಲ್ಲಿ ಹೆಚ್ಚು ಎಂದರೆ ನಾಲ್ಕು ದಿನದಲ್ಲಿ ಮುಗಿದಿದೆ. ಈಗ ಎರಡು ದಿನ ಆಗಿದೆ. ಇನ್ನು ಮತ್ತೆ ವಿಸ್ತರಣೆ ಮಾಡದೆ, ಮತಕ್ಕೆ ಹಾಕಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಶ್ವಾಸಮತಯಾಚನೆ ಒಂದೆರಡು ದಿನದಲ್ಲೇ ಮುಗಿಯಬೇಕೆಂಬ ನಿಯಮಗಳಿಲ್ಲ. ಸದನದ ಸದಸ್ಯರ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಸೋಮವಾರ ಮಾತನಾಡುವವರ ಪಟ್ಟಿ ನೀಡುತ್ತೇವೆ. ಪ್ರತಿಪಕ್ಷದವರು ಮಾತನಾಡಲಿ. ನಂತರ ಮುಖ್ಯಮಂತ್ರಿ ಮಾತನಾಡಿ, ಬಹುಮತಕ್ಕೆ ಹಾಕಿ. ಈ ಚರ್ಚೆಗೆ ಸೋಮವಾರ ಅಂತಿಮ ಹಾಕೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ವಿಶ್ವಾಸಮತಯಾಚನೆ ಎಂಬ ಮಹತ್ವದ ಚರ್ಚೆ ಆಗಿದ್ದರಿಂದ ಸದಸ್ಯರು ಮಾತನಾಡಲು ಅವಕಾಶ ಮಾಡಿಕೊಡಬೇಕು. ಸೋಮವಾರಕ್ಕೆ ಮುಂದೂಡಬೇಕೆಂದು ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದರು. ಸಚಿವ ಡಿಕೆ ಶಿವಕುಮಾರ್‌ ಮಾತನಾಡಿ, ಅತೃಪ್ತ ಶಾಸಕರ ತಲೆ ಮೇಲೆ ಗನ್ ಇಟ್ಟು ಹೇಳಿಕೆಗಳನ್ನು ನೀಡಿಸಲಾಗುತ್ತಿದೆ ಎಂದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್‌, ಸದನದ ಹೊರಗೆ ನಡೆದ ಘಟನೆಗಳ ಬಗ್ಗೆ ನಾನು ನಿಗಾ ವಹಿಸುವುದಿಲ್ಲ. ಶಾಸಕರಿಗೆ ರಕ್ಷಣೆ ಬೇಕೆಂದು ನನಗೆ ಮನವಿ ಮಾಡಿದ್ದರೆ, ಕ್ರಮ ಕೈಗೊಳ್ಳುತ್ತಿದ್ದೆ. ಆದರೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ ಎಂದರು.
ಕಲಾಪವನ್ನು ಸೋಮವಾರಕ್ಕೆ ಮುಂದೂಡಬೇಕೆಂದು ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಮತ್ತೆ ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ಕೋಲಾಹಲ ಉಂಟಾಯಿತು.

ಮಧ್ಯಾಹ್ನದಿಂದ ಚರ್ಚೆಯಲ್ಲಿ ಮಾತನಾಡದೇ ಇದ್ದ ಬಿಜೆಪಿಯ ಸದಸ್ಯರು ಈ ಸಂದರ್ಭದಲ್ಲಿ ಭಾಷಣ ಮಾಡಿದರು. ಮಾಧುಸ್ವಾಮಿ ಒಬ್ಬರೇ ಬಿಜೆಪಿ ಪರವಾಗಿ ಮಾತನಾಡಿದರು. ಎರಡು ದಿನಗಳಿಂದ ಚರ್ಚೆಗೆ ಅವಕಾಶ ನೀಡಲಾಗಿದೆ. ಇನ್ನೂ ಹಲವು ಗಂಟೆ ಇಲ್ಲಿಯೇ ಕೂರಲು ಸಿದ್ಧ. ಆದರೆ ಅಂತಿಮವಾಗಿ ವಿಶ್ವಾಸಮತಯಾಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆಯಲ್ಲಿ ಮಾತನಾಡಿದರು.
ಸ್ಪೀಕರ್‌ ಪರಮಾಧಿಕಾರವನ್ನು ನಾವು ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚಂಬಲ್‌ ಕಣಿವೆ ಡಾಕಾಯಿತರನ್ನು ನೋಡಿದ ಹಾಗೆ ನೋಡ್ತಾರೆ ನಮ್ಮನ್ನು: ಶಿವಲಿಂಗೇಗೌಡ
ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಮಾತನಾಡಿ, ಮುಂಬೈನಲ್ಲಿ ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಸಚಿವರಾದ ಡಿಕೆ ಶಿವಕುಮಾರ್‌, ಜಿಟಿ ದೇವೇಗೌಡ, ನಾನು ಹಾಗೂ ಬಾಲಕೃಷ್ಣ ಅವರನ್ನು ಗೂಂಡಾಗಳಂತೆ ನೋಡಲಾಯಿತು. ಮಳೆಯಲ್ಲಿಯೇ ನಿಲ್ಲಿಸಿದರು. ಅಲ್ಲಿಯೇ ನಾವು ತಿಂಡಿ ತಿಂದೆವು. ಇದೆಂಥಾ ಪ್ರಜಾಪ್ರಭುತ್ವ, ಬಿಜೆಪಿ ಸರಕಾರವೇ ಅಲ್ಲಿ ಇದ್ದಿದ್ದು. ಇದರ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ.

ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದಾರೆ. ಬಿಜೆಪಿಯವರು ಈಗಾಗಲೇ 6 ಬಾರಿ ನಮ್ಮ ಸರಕಾರವನ್ನು ಬೀಳಿಸಲು ಪ್ರಯತ್ನ ನಡೆಸಿದ್ದರು. ನೋಡೋಣ ಯಾವ ಆಡಳಿತ ಬರುತ್ತೋ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ನಾನು ಅಧಿಕಾರಕ್ಕೆ ಬಂದು ಒಂದು ವರ್ಷದಿಂದಲೂ ನನಗೆ ಕೆಲಸ ಮಾಡಲು ಬಿಡಲಿಲ್ಲ ಎಂದು ಎಚ್‌ಡಿಕೆ ಹೇಳಿದರು.
ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತೊಮ್ಮೆ ಮಾತನಾಡಿ,ಸರಕಾರ ಮಾಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ವಿಶ್ವಾಸ ಮೂಡಿಸಬೇಕು ಎಂದರು.

ರಾಜ್ಯಪಾಲರು ಈಗ ಪತ್ರ ಬರೆದು ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಕುದುರೆ ವ್ಯಾಪಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಇಷ್ಟು ದಿನ ಅವರು ಏಕೆ ಸುಮ್ಮನಿದ್ದರು. ಈಗ ಏಕೆ ವಿಶ್ವಾಸಮತಯಾಚನೆಗೆ ಆತುರ ಮಾಡುತ್ತಿರುವುದು ಏಕೆ ಎಂದು ಕುಮಾರಸ್ವಾಮಿ ಹೇಳಿದರು.

ವಿಶೇಷ ವಿಮಾನದ ಮೂಲಕ ಮುಂಬಯಿಗೆ ಶಾಸಕರನ್ನು ಕಳುಹಿಸಿದ್ದು ಯಾರು. ವಿರೋಧ ಪಕ್ಷದ ನಾಯಕರ ಆಪ್ತರೇ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಇದರ ಬಗ್ಗೆ ಏನು ಹೇಳುವುದು ಎಂದು ಕೆಲವು ಭಾವಚಿತ್ರಗಳನ್ನು ಸ್ಪೀಕರ್‌ಗೆ ಕುಮಾರಸ್ವಾಮಿ ನೀಡಿದರು.

ಈ ಜಾಗಕ್ಕೆ ನಾನು ಅಂಟಿಕೊಂಡು ಕೂರುವವನಲ್ಲ ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಮೇಲ್ಮನೆಯಲ್ಲಿ ಬೆಳಗ್ಗೆ ಮುಂದೂಡಿದ್ದ ಸದನ ಮತ್ತೆ ಸೇರಿದಾಗ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಬಳಿ ಪ್ರತಿಭಟನೆಯನ್ಮು ಮುಂದುವರಿಸಿದರು. ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ‌ ಸಿಎಂ ರಾಜೀನಾಮೆಗೆ ಒತ್ತಾಯಿಸಿದರು. ಹೀಗಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ರಾಜ್ಯಪಾಲರು ನೀಡಿರುವ ನಿರ್ದೇಶನ ಹಾಗೂ ವಿಶ್ವಾಸಮತ ಯಾಚನೆ ಕುರಿತು ಸದಸ್ಯರೆಲ್ಲರೂ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ದಿನೇಶ್ ಗುಂಡೂರಾವ್‌ ಆಗ್ರಹಿಸಿದರು.

Facebook Comments

Sri Raghav

Admin