ವಿಶ್ವಾಸ ಮತಯಾಚನೆ ಕಲಾಪಕ್ಕೆ ಸ್ಪೀಕರ್ ಚಾಲನೆ, ಬೃಹನ್ನಾಟಕಕ್ಕೆ ಇಂದೇ ಬೀಳುತ್ತಾ ತೆರೆ ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19- ರಾಜ್ಯಪಾಲರ ಸೂಚನೆ ಮೇರೆಗೆ ವಿಶ್ವಾಸ ಮತಯಾಚನೆ ಕಲಾಪಕ್ಕೆ ಸ್ಪೀಕರ್ ಚಾಲನೆ ನೀಡಿದರು. ಬೆಳಗ್ಗೆ 11.5ಕ್ಕೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ರಮೇಶ್‍ಕುಮಾರ್ ಅವರು ವಿಶ್ವಾಸ ಮತಯಾಚನೆಗೆ ನಾನು ವಿಳಂಬ ಮಾಡುತ್ತಿದ್ದೇನೆ ಎಂಬ ಅಭಿಪ್ರಾಯ ಪಡುವುದು ಬೇಡ.

ನಾನು ಇಲ್ಲಿ ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಪಕ್ಷಪಾತಿಯಾಗುವ ಗತಿ ನನಗೆ ಬಂದಿಲ್ಲ. ನನ್ನ ಚಾರಿತ್ರ್ಯ ವಧೆ ಮಾಡುವವರು ಸ್ವಲ್ಪ ತಾವು ತಿರುಗಿ ನೋಡಿಕೊಳ್ಳಲಿಎಂದರು.  ಇಂದಿನ ಕಲಾಪ ಪೂರ್ವನಿಗದಿಯಂತೆ ನಡೆಯಲಿದೆ.

ವಿಶ್ವಾಸಮತಯಾಚನೆ ಮೇಲಿನ ಚರ್ಚೆ ಅದಕ್ಕೆ ಉತ್ತರ ಮತ್ತು ಮತದಾನ ಇಷ್ಟೇ ನಡೆಯಲಿದೆ. ಬೇರೆ ಯಾವುದೇ ಕಲಾಪಕ್ಕೂ ಅವಕಾಶ ಕೊಡುವುದಿಲ್ಲ. ಈಗಾಗಲೇ ಅಜೆಂಡಾವನ್ನು ಕಳುಹಿಸಿಕೊಡಲಾಗಿದೆ. ಅದರಂತೆ ಅಧಿವೇಶನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದರು.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರರು ಸಲ್ಲಿಸಿರುವ ಪಾಯಿಂಟ್ ಆಫ್ ಆರ್ಡರ್(ಕ್ರಿಯಾಲೋಪ) ಕುರಿತು ಕಾನೂನಾತ್ಮಕ ಅಂಶಗಳ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ.

ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಮತ್ತಷ್ಟು ಸ್ಪಷ್ಟನೆಗಳಿಗಾಗಿ ಖುದ್ದು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ನನ್ನ ರೂಲಿಂಗ್ ಹೇಳುತ್ತೇನೆ. ಆವರೆಗೂ ನನ್ನ ರೂಲಿಂಗ್‍ನ್ನು ಕಾಯ್ದರಿಸಲಾಗುತ್ತದೆ ಎಂದು ಹೇಳಿದರು.

ವಿಶ್ವಾಸ ಮತಯಾಚನೆಗೆ ಪರೋಕ್ಷವಾಗಿ ನಾನು ವಿಳಂಬ ಮಾಡುತ್ತಿದ್ದೇನೆ ಎಂಬ ಮಾತುಗಳನ್ನಾಡುತ್ತಿರುವವರ ಬಗ್ಗೆ ನಾನು ಅನುಕಂಪ ವ್ಯಕ್ತಪಡಿಸುತ್ತೇನೆ. ಅವರಿಗೆ ಅವರದೇ ಆದಂತಹ ಪ್ರತ್ಯೇಕ ನಿಲುವುಗಳಿರಬಹುದು. ಅವರ ನಿಲುವುಗಳಿಗೆ ನಾನು ಸಹಕರಿಸಬೇಕೆಂಬುದು ನಿರೀಕ್ಷೆ ತಪ್ಪು.

ನನ್ನಲ್ಲಿ ಸ್ಪಷ್ಟತೆ ಇದೆ.ಸದನದ ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಂಡು ನಂತರ ಅಧಿವೇಶನವನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡುವವರಿಗೆ ನಾನು ಏನೂ ಹೇಳಲಾಗುವುದಿಲ್ಲ ಎಂದರು.

ಇಂದು ಬೆಳಗ್ಗೆ ನಾನು ಮನೆಯಿಂದ ಹೊರಡುವಾಗ ಮಗಳ ಸಮಾನಾಳದ ಸೊಸೆ ಅಪ್ಪಾಜಿ ಒಂದು ದಿನ ಅಧಿವೇಶನ ಮುಂದೂಡಿದರೆ 12 ಕೋಟಿ ಲಾಭವಾಗುತ್ತದೆ ಎಂದು ಹೇಳಿದರು. ನಾನೇನೊ ಸಂಪಾದನೆ ಮಾಡಿಟ್ಟಿದ್ದೇನೆ ಎಂದು ಅನುಮಾನಿಸಬೇಕಿಲ್ಲ.

ನಾನು ಗಳಿಸಿರುವುದನ್ನು ಯಾರೂ ಬೇಕಾದರೂ ಬಂದು ನೋಡಬಹುದು. ಕೋಟಿ ಕೋಟಿ ಲೂಟಿ ಮಾಡಿದವರನ್ನು ಪ್ರಶ್ನಿಸುವ ಧೈರ್ಯವೇ ಇಲ್ಲ, ನನ್ನ ಮೇಲೆ ಚಾರಿತ್ರ್ಯ ವಧೆಯಾಗುವಂತಹ ಲಕ್ಷ ಆರೋಪಗಳನ್ನು ಮಾಡಿದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನನಗಿದೆ ಎಂದು ಹೇಳಿದ ಸ್ಪೀಕರ್ ಅವರು, ವಿಶ್ವಾಸ ಮತಯಾಚನೆಗೆ ಚಾಲನೆ ನೀಡಿದರಲ್ಲದೆ ಕಲಾಪವನ್ನು ಉದ್ದೇಶಿಸಿ ಮಾತನಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೂಚನೆ ಕೊಟ್ಟರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin