ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.19 -ಕರ್ನಾಟಕ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹತೆ ಇಲ್ಲದವರನ್ನು ಸೇರ್ಪಡೆ ಮಾಡಲಾದ ಅಧಿಕಾರಿಗಳು ಮತ್ತು  ಸಿಬ್ಬಂದಿಯವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ದಂಡನೆ ವಿಧಿಸುವ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೂಚಿಸಿದ್ದಾರೆ.

ಎಚ್ಚರಿಕೆ ನೋಟಿಸು ನೀಡಲಾಗಿರುವ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಅವರ ಅಧೀನ ಸಿಬ್ಬಂದಿಯವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕಠಿಣ ದಂಡನೆ ವಿಧಿಸುವ ಕುರಿತು ನಿಯಮಾನುಸಾರ ಅಗತ್ಯ ಕ್ರಮ‌ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ 10 ದಿನಗಳ ಒಳಗೆ ತಮ್ಮ ಕಚೇರಿಗೆ ವರದಿ ಸಲ್ಲಿಸಬೇಕೆಂದು ಅವರು ಸೂಚಿಸಿದ್ದಾರೆ.

ಈ ಸಂಬಂಧ‌ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು, ಬಿಬಿಎಂಪಿಯ ಉತ್ತರ, ದಕ್ಷಿಣ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.‌ ಅರ್ಹತೆ ಇಲ್ಲದವರನ್ನು ಸೇರ್ಪಡೆಗೊಳಿಸಿದ್ದನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ  ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪತ್ರದಲ್ಲಿ‌ ತಿಳಿಸಿದ್ದಾರೆ.

ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ. ಜನವರಿ 16 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ಅನುಸರಿಸದೆ ಅರ್ಹತೆ ಇಲ್ಲದ ಮತದಾರರನ್ನು ನೋಂದಾಯಿಸಲಾಗಿದೆ ಎಂಬ ಆರೋಪವಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿ ಬಾಲಚಂದ್ರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿ ಈಶ್ವರಪ್ರಸನ್ನಯ್ಯ, ಹೆಬ್ಬಾಳ ಕ್ಷೇತ್ರದ ಕಂದಾಯ ಅಧಿಕಾರಿ ನಾಗರತ್ನಮ್ಮ, ನೆಲಮಂಗಲ ತಾಲೂಕು ತಹಶೀಲ್ದಾರ್ ಎಂ.ಶ್ರೀನಿವಾಸಯ್ಯ, ದೊಡ್ಡಬಳ್ಳಾಪುರ ತಾಲೂಕು ತಹಶೀಲ್ದಾರ್ ಶಿವರಾಜು,

ಕನಕಪುರ ತಾಲೂಕು ತಹಶೀಲ್ದಾರ್ ಆನಂದಯ್ಯ, ರಾಮನಗರ ತಾಲೂಕು ತಹಶೀಲ್ದಾರ್ ಟಿ.ಎನ್. ನರಸಿಂಹಮೂರ್ತಿ, ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್, ಅವರಿಗೆ ನಿರಂತರವಾಗಿ‌ ಪರಿಷ್ಕರಣೆಯಲ್ಲಿ ಸರಿಪಡಿಸಿಕೊಂಡು, ಇನ್ನು ಮುಂದೆ ಲೋಪಗಳು ಪುನರಾವರ್ತನೆಯಾಗದಂತೆ ವೈಯಕ್ತಿಕ  ಗಮನಹರಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ನೋಟಿಸ್ ನೀಡಲಾಗಿರುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin