ವಿವಿ ಪುರಂ ಬಡಾವಣೆಯಲ್ಲಿ ಬಾಯ್ತೆರೆದಿರುವ ಕಲ್ವರ್ಟ್‍ನ ಕಂಬಿಗಳು, ಆತಂಕದಲ್ಲಿ ಸಾರ್ವಜನಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜು. 2- ನಗರದ ವಿ.ವಿ.ಪುರಂ ಬಡಾವಣೆಯಲ್ಲಿ (13ನೇ ವಾರ್ಡ್) ಶ್ರೀ ಬಸವೇಶ್ವರ ಸಮುದಾಯ ಭವನದ ಮುಂಭಾಗದ ರಸ್ತೆಯ ಚರಂಡಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಕಲ್ವರ್ಟ್ (ಅಡಿಗಾಲುವೆ)ನ ಕಬ್ಬಿಣದ ಕಂಬಿಗಳು ಬಾಯ್ತೆರೆದಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಾಗರೀಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ವಿವಿ ಪುರಂ ಬಡಾವಣೆಯೂ ಒಂದು ಅತಿ ಹೆಚ್ಚು ವಾಣಿಜ್ಯೋದ್ಯಮಿಗಳು, ಸರಕಾರಿ ನೌಕರರು, ಮಧ್ಯಮ ವರ್ಗದವರು ವಾಸಿಸುವ ಬಡಾವಣೆ ಇದಾಗಿದೆ, ಕಳೆದೊಂದು ವರ್ಷದ ಹಿಂದೆ ನಗರಸಭೆಯವರು ಚರಂಡಿಯನ್ನು ಅಭಿವೃದ್ದಿಯನ್ನು ಮಾಡಿದ್ದು , ಆದರೆ ಅಡ್ಡ ರಸ್ತೆ ( ಸಂಪರ್ಕ ರಸ್ತೆಗೆ) ಕಲ್ವರ್ಟ್ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರು , ವಾಹನಗಳು ಸಂಚಾರಕ್ಕೆ ಅನುಮಾಡಿಕೊಡಲಾಗುವುದು ಸರಿಯಷ್ಟೇ, ಆದರೆ ಈ ಭಾಗದಲ್ಲಿ ನಿರ್ಮಾಣ ಮಾಡಿರುವ ಈ ಕಲ್ವರ್ಟ್‍ನ ಸಿಮೆಂಟ್ ಎದ್ದು ಹೋಗಿದ್ದು, ಕಬ್ಬಿಣದ ಕಂಬಿಗಳು ಬಾಯ್ತೆರೆದು ಸಾರ್ವಜನಿಕರ ಹಾಗೂ ವಾಹನ ಸವಾರರ ಆತಂಕಕ್ಕೆ ಎಡೆಮಾಡಿಕೊಟ್ಟಿದ್ದರೂ ಸಹ ಈ ತನಕ ನಗರಸಭೆಯವರು ಕಂಡು ಕಾಣದಂತೆ ಜಾಣಕುರುಡು ನೀತಿಯನ್ನು ಅನುಸರಿಸುತ್ತಿದ್ದಾರೆ.

ಓಡಾಟಕ್ಕೆ ದುಸ್ತರ:
ಈ ಭಾಗದ ರಸ್ತೆಯಲ್ಲಿ ಮನೆಗಳವರು ಓಡಾಡುವುದೇ ದುಸ್ತರವಾಗಿದೆ, ಇನ್ನು ದ್ವಿಚಕ್ರ ವಾಹನಗಳ ಚಕ್ರಕ್ಕೆ ಕಂಬಿಗಳು ಸಿಲುಕಿದರೆ ಬೀಳುವುದು ಖಚಿತ, ಇನ್ನೂ ರಾತ್ರಿ ವೇಳೆಯಲ್ಲಿ ಕರೆಂಟ್ ಹೋದಲ್ಲಿ ಬೀದಿ ದೀಪಗಳಿಲ್ಲದ ಸಮಯದಲ್ಲಿ ಈ ರಸ್ತೆಯಲ್ಲಿ ಯಾರಾದರೂ ಬಂದರೆ ಅವರ ಗತಿ ದೇವರೇ ಗತಿ ಎಂಬಂತಾಗಿದೆ.

ವಯೋವೃದ್ದರ ಆತಂಕ:
ಬಡಾವಣೆಯಲ್ಲಿನ ಈ ಭಾಗದ ಮನೆಗಳಲ್ಲಿನ ವಯೋವೃದ್ದರು, ಮಧುಮೇಹಿಗಳು ಈ ರಸ್ತೆಯಲ್ಲಿ ಓಡಾಡುವಾಗ ಈ ಕಬ್ಬಿಣದ ಕಂಬಿಗಳು ಕಾಲಿಗೆ ತಗಲಿ ಗಾಯವಾದಲ್ಲಿ ಆಗುವಂತಹ ಅನಾಹುತ, ಅವರುಗಳು ಪಡುವ ವೇದನೆ ನರಕಯಾತನೆ ಅವರಿಗೇ ಗೊತ್ತು. ಇನ್ನು ಮಕ್ಕಳು , ದ್ವಿಚಕ್ರ ವಾಹನ ಸವಾರರು ಓಡಾಡಲು ಹರಸಾಹಸವೇ ಪಡುವಂತಾಗಿದೆ, ಅದೆಷ್ಟೋ ಮಂದಿ ಈ ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟು ಪಕ್ಕದ ರಸ್ತೆಯನ್ನು ಸುತ್ತಿ ಬಳಸಿಕೊಂಡು ಮನೆ ಸೇರುವಂತಾಗಿದೆ.

ಕ್ರಮ:
ನಗರದ ಮೂಲಭೂತ ಸೌಕರ್ಯಗಳ ನೊಗ ಹೊತ್ತಿರುವ ನಗರಸಭೆ ನಗರದಾಜ್ಯಾತ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿರುತ್ತಿರುವುದು ಸರಿಯಷ್ಟೆ, ಆದರೆ ನಗರದಲ್ಲಿನ ವಿವಿ ಪುರಂ ಬಡಾವಣೆಯಲ್ಲಿನ ಬಾಯ್ತೆರೆದಿರುವ ಕಲ್ವರ್ಟ್ ರಸ್ತೆಯನ್ನು ಸರಿಪಡಿಸುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

#ದೇವಿಮಂಜುನಾಥ್

Facebook Comments