ಉಗ್ರಾಣದಲ್ಲಿ ದಾಸ್ತಾನು ಶೇಖರಣೆಗೆ ರೈತರಿಗೆ ರಿಯಾಯ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.18- ರಾಜ್ಯ ಉಗ್ರಾಣ ನಿಗಮದ 50 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ 3.76 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಆಡಳಿತ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಉಗ್ರಾಣ ನಿಗಮದ ನೂತನ ಕಟ್ಟಡ ಉದ್ಘಾಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೆರವೇರಿಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸೋಮಶೇಖರ್, ರಾಜ್ಯ ಉಗ್ರಾಣ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ.

ಇದರಲ್ಲಿ ರಾಜ್ಯದಷ್ಟೇ ಪಾಲನ್ನು ಕೇಂದ್ರ ಸಹ ಹೊಂದಿದೆ. ಇದನ್ನು ರೈತರ ಉಪಯೋಗಕ್ಕಾಗಿ ನಾವು ಸ್ಥಾಪನೆ ಮಾಡಿದ್ದು, ಇದರಿಂದ ಕೋಟ್ಯಂತರ ರೈತರಿಗೆ ಇದುವರೆಗೆ ಉಪಯೋಗವಾಗಿದೆ. ಕಡಿಮೆ ಬೆಲೆ ಇದ್ದಾಗ ರೈತರು ತಮ್ಮ ದಾಸ್ತಾನನ್ನು ನಮ್ಮ ರಾಜ್ಯದಲ್ಲಿರುವ ಸರ್ಕಾರದ ಅಧೀನದ ಗೋದಾಮುಗಳಲ್ಲಿ ಮಾಡಬಹುದಾಗಿದೆ ಎಂದರು.

ಹೀಗೆ ದಾಸ್ತಾನು ಮಾಡಲಾದ ಸರಕಿಗೆ ಉಗ್ರಾಣಗಳಿಂದ ರಶೀದಿಗಳು ಲಭಿಸಲಿದ್ದು, ಇದರಿಂದ ಬ್ಯಾಂಕ್ ಗಳು ಸೇರಿದಂತೆ ಇತರ ಹಣಕಾಸಿನ ಸಂಸ್ಥೆಗಳಿಂದ ಸಾಲ ಸೌಲಭ್ಯಗಳು ಸಿಗಲಿವೆ ಎಂದು ವಿವರಿಸಿದರು. ದಾಸ್ತಾನಿಗೆ ರಿಯಾಯಿತಿ: ಕೃಷಿಕರಿಂದ ಶೇಖರಣ ಮಾಡಿದ ದಾಸ್ತಾನಿಗೆ ಸಂಗ್ರಹಣಾ ಶುಲ್ಕದಲ್ಲಿ ಶೇಕಡಾ 20 ರಷ್ಟು ಹಾಗೂ ಎಸ್ಸಿ-ಎಸ್ಟಿಯವರಿಗೆ ಶೇ25ರಷ್ಟು ರಿಯಾಯಿತಿ ದೊರೆಯಲಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಬಂದಿದೆ ಎಂದರು.

ರಾಜ್ಯಾದ್ಯಂತ ಇರುವ ಉಗ್ರಾಣ ಕೇಂದ್ರಗಳಲ್ಲಿ ಗಣಕೀಕರಣ ಮತ್ತು ಆನ್‍ಲೈನ್ ವ್ಯವಸ್ಥೆ ಸಹ ಇರಲಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ರೈತರಿಂದ ಭತ್ತ, ರಾಗಿ, ಬಿಳಿಜೋಳ, ತೊಗರಿ, ಕಡಲೆ, ಹೆಸರು, ಉದ್ದು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿದ್ದು ಇವುಗಳನ್ನು ರಾಜ ಉಗ್ರಾಣಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ 1962ರ ಕಾಯಿದೆಯಂತೆ ಎಲ್ಲಾ ರಾಜ್ಯಗಳಲ್ಲೂ ಉಗ್ರಾಣ ನಿಗಮಗಳಿರುತ್ತವೆ. ಕೇಂದ್ರ ಸರ್ಕಾರದ ಕೇಂದ್ರ ಉಗ್ರಾಣ ನಿಗಮ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಶೇ 50:50ರಷ್ಟು ಷೇರು ಬಂಡವಾಳ ಹೂಡಿರುತ್ತವೆ. ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ 1958ರಲ್ಲಿ ರಾಯಚೂರು, ಹುಬ್ಬಳ್ಳಿ ಮತ್ತು ಮೈಸೂರುಗಳಲ್ಲಿ ನಿಗಮವು ತನ್ನ ರಾಜ್ಯ ಉಗ್ರಾಣಗಳ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ರಾಜ್ಯಾದ್ಯಂತ ಇಂದು ನಿಗಮವು 17.50 ಲಕ್ಷ ಮೆ.ಟನ್‍ಗಳಷ್ಟು ಸಾಮಥ್ರ್ಯದ ಗೋದಾಮುಗಳೊಂದಿಗೆ 153 ರಾಜ್ಯ ಉಗ್ರಾಣ ಶಾಖೆಗಳನ್ನು ಮತ್ತು 1 ಪ್ರಾದೇಶಿಕ ಕಛೇರಿ ಹೊಂದಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರ ಪ್ರಮುಖರು ಇದ್ದರು.

Facebook Comments