ಆರೋಗ್ಯ ಸಚಿವರ ಭೇಟಿಗೆ ವಾಚ್, ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.10- ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ವೈಯಕ್ತಿಕ ಭೇಟಿ ಮಾಡುವಂತಿದ್ದರೆ, ಇನ್ನು ಮುಂದೆ ಕೈ ಗಡಿಯಾರ, ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ..! ಕೈ ಗಡಿಯಾರ ಕಟ್ಟಿಕೊಂಡು, ಮೊಬೈಲ್ ಜೇಬಲ್ಲಿ ಇಟ್ಟುಕೊಂಡು ಆರೋಗ್ಯ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಹೋದರೆ ಭೇಟಿಗೆ ಅವಕಾಶ ಕೊಡುವುದಿಲ್ಲ. ವಾಚ್ ಮತ್ತು ಮೊಬೈಲ್‍ಗಳನ್ನು ಕಡ್ಡಾಯವಾಗಿ ಹೊರಗಿಟ್ಟೇ ಸಚಿವರನ್ನು ಭೇಟಿ ಮಾಡಬೇಕಿದೆ.

ಇತ್ತೀಚೆಗೆ ಮಂಗಳೂರಿಗೆ ಪ್ರವಾಸ ತೆರಳಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತೆರಳಿದ್ದರು.  ಈ ವೇಳೆ ಕೈ ಗಡಿಯಾರ ಮತ್ತು ಮೊಬೈಲ್ ಹೊರಗಿಟ್ಟು ಬರುವಂತೆ ತಿಳಿಸಿದ್ದಾರೆ. ಸಚಿವರ ಸೂಚನೆ ಮೇರೆಗೆ ಮೊಬೈಲ್ ಹಾಗೂ ಕೈ ಗಡಿಯಾರ ಹೊರಗಿಟ್ಟು ಆರೋಗ್ಯ ಇಲಾಖೆ ಅಧಿಕಾರಿ ವೈಯಕ್ತಿಕ ಭೇಟಿ ಮಾಡಿ ಮಾತುಕತೆ ನಡೆಸಿ ಹೊರ ಬಂದಿದ್ದಾರೆ.

ಈ ರೀತಿಯ ಅನುಭವ ಅನೇಕ ಅಧಿಕಾರಿಗಳಿಗೆ ಆಗಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಈ ಫರ್ಮಾನು ಇದೀಗ ಆರೋಗ್ಯ ಇಲಾಖೆಯ ಅಧಿಕಾರಿ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಸಚಿವರ ಈ ನಡೆ ಮರ್ಮ ಅರಿಯದೇ ಆರೋಗ್ಯ ಇಲಾಖೆ ಅಧಾರಿಗಳು ಒದ್ದಾಡುತ್ತಿದ್ದಾರೆ.

ಕೈ ಗಡಿಯಾರ ಕಟ್ಟಿಕೊಂಡು ಭೇಟಿ ಮಾಡುವುದರಲ್ಲಿ ತಪ್ಪೇನಿದೆ ಇನ್ನು ವೈಯಕ್ತಿಕ ಮಾತುಕತೆ ವೇಳೆ, ಯಾವುದಾದರೂ ಸಂಪರ್ಕ ಸಂಖ್ಯೆ, ಅಧಿಕಾರಿಗಳ ವಿವರ ಕೊಡಬೇಕಾದರೂ ಮೊಬೈಲ್ ಕೈಯಲ್ಲಿ ಇರುವುದು ಕ್ಷೇಮ. ಆದರೆ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಹೋದಾಗ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ, ಕೈ ಗಡಿಯಾರವೂ ಕಟ್ಟಿಕೊಳ್ಳುವಂತಿಲ್ಲ ಎಂದು ಸೂಚಿಸುತ್ತಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ.

# ರಹಸ್ಯ ಕಾರ್ಯಾಚರಣೆ ಭಯ?:
ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವುದು ರಹಸ್ಯ ಕಾರ್ಯಾಚರಣೆಯ ಅಡಿಯೋ ಹಾಗೂ ವಿಡಿಯೋಗಳು. ಹೀಗಾಗಿ ವೈಯಕ್ತಿಕ ಭೇಟಿ ವೇಳೆ ನಡೆಯುವ ಮಾತುಕತೆ ರೆಕಾರ್ಡ್ ಮಾಡಿಕೊಂಡು ಹೊರಗೆ ಬಿಟ್ಟರೆ ದೊಡ್ಡ ಆಪತ್ತು ಎದುರಾಗಲಿದೆ.

ಇನ್ನೂ ಈಗಿನ ಪರಿಸ್ಥಿತಿಯಲ್ಲಿ ಹೊರಗಿನವರು ಇರಲಿ ಅಧಿಕಾರಿಗಳನ್ನು ಕೂಡ ನಂಬಲಿಕ್ಕೆ ಅಸಾಧ್ಯ. ಯಾವ ಹುತ್ತದಲ್ಲಿ ಯಾವ ಯಾವ ಇರುತ್ತೋ ಯಾರಿಗೆ ಗೊತ್ತು ಅಲ್ಲವೇ ? ಹೀಗಾಗಿ ರಹಸ್ಯ ಕಾರ್ಯಾಚರಣೆ ಭಯದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಮ್ಮನ್ನು ವೈಯಕ್ತಿಕ ಭೇಟಿ ಮಾಡುವ ವೇಳೆ ವಾಚ್ ಕಟ್ಟಿಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ ಎಂದೇ ಹೇಳಲಾಗುತ್ತಿದೆ.

Facebook Comments