ಆಶ್ಲೇಷ ಮಳೆ ಅಬ್ಬರಕ್ಕೆ ಭಾರಿಯಾದ ಜಲಾಶಯಗಳು, ಕುಸಿದ ವಿದ್ಯುತ್ ಬೇಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

– ರವೀಂದ್ರ ವೈ.ಎಸ್.
ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಸುರಿದ ಆಶ್ಲೇಷ ಮಹಾಮಳೆಯಿಂದ ನಾಡಿನ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ.
ಪ್ರಮುಖ ಜಲಾಶಯಗಳಾದ ಕೆಆರ್‍ಎಸ್ , ತುಂಗಭದ್ರಾ, ಭದ್ರಾ, ಆಲಮಟ್ಟಿ, ಘಟಪ್ರಭಾ, ಮಲಪ್ರಭಾ, ಕಬಿನಿ, ಹಾರಂಗಿ, ಹೇಮಾವತಿ, ಸೂಪಾ ಸೇರಿದಂತೆ ಬಹುತೇಕ ಎಲ್ಲಾ ಜಲಾಶಯಗಳು ಕೆಲವೇ ದಿನಗಳಲ್ಲಿ ತುಂಬಲಿವೆ.

ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್ ಇಲ್ಲವೇ ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಜಲಾಶಯಗಳು ಭರ್ತಿಯಾಗುತ್ತಿದ್ದವು. ಆದರೆ, ಈ ಬಾರಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದ್ದರಿಂದ ನದಿಗಳು, ಹಳ್ಳಕೊಳ್ಳಗಳು, ಕೆರೆ ಕಟ್ಟೆ, ತುಂಬಿ ಭಾರೀ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬಂದಿದೆ.

ಪರಿಣಾಮ ಬೇಸಿಗೆಯಲ್ಲಿ ತಾಂಡ ವವಾಡುವ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳು ತುಸು ನಿವಾರಣೆಯಾಗಿರುವುದರಿಂದ ರಾಜ್ಯ ಸರ್ಕಾರ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ. ಕಾವೇರಿ ಜಲಾನಯನ ತೀರ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ಭಾರೀ ಮಳೆಯಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಹೋಗಿದೆ.

ಹೀಗಾಗಿ ಪದೇ ಪದೇ ನೀರಿಗಾಗಿ ಕೇಂದ್ರದ ಮೂಲಕ ಕರ್ನಾಟಕದ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದ ತಮಿಳುನಾಡಿನ ಜಗಳಕ್ಕೂ ವಿರಾಮ ಬೀಳಲಿದೆ. ಜಲಾಶಯಗಳು ಭರ್ತಿಯಾಗಿ ರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಸರ್ಕಾರವು ಬೀಸೋದೊಣ್ಣೆಯಿಂದ ಸದ್ಯಕ್ಕೆ ಪಾರಾಗಿದೆ.

ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ವಿದ್ಯುತ್ ಪೂರೈಕೆ ಮಾಡುವ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಜಲಾಶಯದ ಲಿಂಗನಮಕ್ಕಿ ಅಣ್ಣೆಕಟ್ಟೆಗೆ ಈ ಬಾರಿ ಅವಗೂ ಮುನ್ನವೇ ಭರ್ತಿಯಾಗಿದೆ.
1819 ಅಡಿ ಸಾಮಥ್ರ್ಯದ ಅಣೆಕಟ್ಟಿನಲ್ಲಿ 1812ಅಡಿ ನೀರು ಸಂಗ್ರಹವಾಗಿದೆ.

ಕೇವಲ ಏಳು ಅಡಿ ಬಾಕಿ ಇದ್ದು, ಒಳ ಹರಿವು ಹೆಚ್ಚಿರುವ ಕಾರಣ ಒಂದೆರಡು ದಿನಗಳಲ್ಲಿ ಭರ್ತಿಯಾಗುವ ಸಂಭವವಿದೆ. ಲಿಂಗನಮಕ್ಕಿ ಜಲಾಶಯ ತುಂಬಿರುವ ಕಾರಣ ವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ.

# ಒಳಹರಿವು ಹೆಚ್ಚಳ.. : 
ಮುಂಗಾರು ಆರಂಭವಾಗಿ ಮೂರುತಿಂಗಳು ಕಳೆದರೂ ಅಂದರೆ, ಜುಲೈ ಅಂತ್ಯದವರೆಗೂ ಜಲವಿದ್ಯುತ್ ಘಟಕಗಳಿರುವ ಜಲಾಶಯಗಳಿಗೆ ನೀರಿನ ಒಳಹರಿವು ಉತ್ತಮವಾಗಿರಲಿಲ್ಲ. ಜುಲೈ 30ಕ್ಕೆ ಲಿಂಗನಮಕ್ಕಿಯಲ್ಲಿ ಶೇ.31.94, ಸೂಫಾ ಜಲಾಶಯದಲ್ಲಿ ಶೇ.51.55 ಹಾಗೂ ಮಾಣಿಯಲ್ಲಿ ಶೇ.25.47ರಷ್ಟು ನೀರು ಸಂಗ್ರಹವಿತ್ತು.

ಆದರೆ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಭರ್ತಿಯಾಗಿದೆ. ಆ.3ರಂದು ಸೂಫಾ ಜಲಾಶಯದಲ್ಲಿ ಶೇ.98.23 ಹಾಗೂ ಮಾಣಿಯಲ್ಲಿ ಶೇ.65.4ರಷ್ಟು ನೀರು ಸಂಗ್ರಹವಾಗಿದೆ. ಹಾಗಾಗಿ, ಜಲವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ ವಿದ್ಯುತ್ ಬೇಡಿಕೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಉಷ್ಣ ವಿದ್ಯುತ್ ಉತ್ಪಾದನೆಯೂ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬಳ್ಳಾರಿಯ ಬಿಟಿಪಿಎಸ್ ಹಾಗೂ ವೈಟಿಪಿಎಸ್ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ.

ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮೂರು ಘಟಕಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು, ಬೇಡಿಕೆಗೆ ಅನುಗುಣವಾಗಿ 700- 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಒಟ್ಟಾರೆ ಉತ್ತಮ ಮಳೆಯಿಂದಾಗಿ ವಿದ್ಯುತ್ ಬೇಡಿಕೆ ತಗ್ಗಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಒತ್ತಡ ತಗ್ಗಿದೆ. ಇದರಿಂದಾಗಿ ಸದ್ಯ 25 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಶೇಖರಣೆಯಾಗಿದ್ದು, ರಾಜ್ಯವನ್ನು ಬಾಸುತ್ತಿದ್ದ ಕಲ್ಲಿದ್ದಲು ಕೊರತೆ ಸಮಸ್ಯೆ ಸದ್ಯ ನಿವಾರಣೆಯಾದಂತಾಗಿದೆ.

# ಲಾಕ್‍ಡೌನ್‍ನಿಂದ ಕುಸಿದ ವಿದ್ಯುತ್ ಬೇಡಿಕೆ : 
ಈ ಸಲ ಕೊರೊನಾ ಲಾಕ್‍ಡೌನ್ ಹಾಗೂ ರಾಜ್ಯದ ಕೆಲವೆಡೆ ಸುರಿದ ಧಾರಾಕಾರ ಮಳೆ, ನೆರೆಯಿಂದಾಗಿ ಕೃಷಿ ಪಂಪ್ಸೆಟ್ ಬಳಕೆ ಕಡಿಮೆಯಾಗಿದ್ದು, ಸರಾಸರಿ 2,500ರಿಂದ 3000 ಮೆಗಾವ್ಯಾಟ್‍ನಷ್ಟು ಬೇಡಿಕೆ ಇಳಿಕೆಯಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನಾ ಘಟಕಗಳ ಮೇಲಿನ ಒತ್ತಡವೂ ತಗ್ಗಿದೆ.

ಕಳೆದ ಎರಡು ತಿಂಗಳಿನಿಂದ ವಾಣಿಜ್ಯ ಬಳಕೆ ವಿದ್ಯುತ್‍ಗೆ ಬೇಡಿಕೆಯಿರಲಿಲ್ಲ. ಈಚೆಗೆ ಲಾಕ್‍ಡೌನ್ ನೀಡಿದ ಕೆಲವು ವಿನಾಯಿತಿಗಳಿಂದ ವಾಣಿಜ್ಯ ಚಟುವಟಿಕೆ ಆರಂಭಗೊಂಡಿದ್ದರಿಂದ ವಿದ್ಯುತ್ ಬೇಡಿಕೆ ಹೆಚ್ಚಳ ಕಂಡಿತ್ತು.

ಬೆಂಗಳೂರು ಒಳಗೊಂಡಬೆಸ್ಕಾಂ ವ್ಯಾಪ್ತಿಯಲ್ಲೂ ಸರಾಸರಿ 1,000 ಮೆಗಾ ವ್ಯಾಟ್‍ನಷ್ಟು ಬೇಡಿಕೆ ಇಳಿಕೆಯಾಗಿದೆ. ಕಳೆದ ಮಾರ್ಚ್ ಅಂತ್ಯಕ್ಕೆ 12 ಸಾವಿರ ಮೆಗಾ ವ್ಯಾಟ್ ದೈನಂದಿನ ಬೇಡಿಕೆಯ ಗಡಿ ದಾಟಿದ್ದ ವಿದ್ಯುತ್ ಬಳಕೆಯು ಲಾಕ್ಡೌನ್ ವೇಳೆ ಕುಸಿತ ಕಂಡಿತ್ತು.

ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಬಳಕೆ ಪ್ರಮಾಣ ತೀವ್ರ ಕುಸಿತ ಕಂಡು ದೈನಂದಿನ ಬೇಡಿಕೆಯು 8 ಸಾವಿರ ಮೆಗಾ ವ್ಯಾಟ್ ತಲುಪಿತ್ತು. ಆದರೆ, ಹಂತಹಂತವಾಗಿ ಲಾಕ್‍ಡೌನ್ ಸಡಿಲಗೊಂಡ ನಂತರ ವಾಣಿಜ್ಯ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಕೃಷ್ಣಾ ನದಿಗೆ ಹರಿಸಿದ ಪರಿಣಾಮ ರಾಜ್ಯದ ಆಲಮಟ್ಟಿ, ನಾರಾಯಣಪುರ ಸೇರಿದಂತೆ ಹಲವು ಜಲಾಶಯಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿದೆ.

ಲಕ್ಷಾಂತರ ಜನರ ಆಸ್ತಿಪಾಸ್ತಿ ಜತೆಗೆ ಸಾಕಷ್ಟು ಬೆಳೆಯೂ ಕೊಚ್ಚಿ ಹೋಗಿದೆ. ಜತೆಗೆ, ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. ಇದರಿಂದಾಗಿ ಕೃಷಿ ಪಂಪ್ಸೆಟ್ ಬಳಕೆ ಪ್ರಮಾಣ ತಗ್ಗಿದ್ದು, ವಿದ್ಯುತ್ ಬೇಡಿಕೆಯಲ್ಲೂ 2,500 ಮೆಗಾವ್ಯಾಟ್‍ನಿಂದ 3000 ಮೆಗಾವ್ಯಾಟ್‍ನಷ್ಟು ಇಳಿಕೆಯಾಗಿದೆ.

ಸದ್ಯ ಸರಾಸರಿ 8,500 ಮೆಗಾವ್ಯಾಟ್‍ನಷ್ಟು ವಿದ್ಯುತ್ ಬೇಡಿಕೆ ಇದೆ. ನಿತ್ಯ ಹಂಚಿಕೆಯಾಗುವ ವಿದ್ಯುತ್ ಪ್ರಮಾಣಕ್ಕಿಂತಲೂ ಬಳಕೆ ಪ್ರಮಾಣ ಕಡಿಮೆ ಇದೆ.ಮತ್ತೊಂದೆಡೆ ಕೊರೊನಾ ಲಾಕ್ಡೌನ್ನಿಂದಾಗಿ ದೇಶದ ಬಹುತೇಕ ಕಾರ್ಖಾನೆ, ಕಚೇರಿಗಳನ್ನು ಮುಚ್ಚಿದ ಪರಿಣಾಮ, ವಿದ್ಯುತ್ ಬಳಕೆಯಲ್ಲಿ ಶೇ.23ರಷ್ಟು ಕಡಿತವಾಗಿತ್ತು.

ಏಪ್ರಿಲ್‍ನಲ್ಲಿ ಶೇ.22.75 ಕಡಿತದೊಂದಿಗೆ 85.05 ಬಿಲಿಯನ್ ಯುನಿಟ್‍ಗಳಿಗೆ ಇಳಿದಿದೆ. ಈ ಮೊದಲು ಅಂದರೆ ಕಳೆದ ವರ್ಷ ಇದೇ ಸಂದರ್ಭದಲ್ಲಿ 110.11 ಬಿಲಿಯನ್ ಯುನಿಟ್‍ಗಳಷ್ಟು ವಿದ್ಯುತ್ ಬಳಕೆಯಾಗುತ್ತಿತ್ತು.
ಏಪ್ರಿಲ್ ತಿಂಗಳು ಪೂರ್ಣವಾಗಿ ಯಾವುದೇ ಆರ್ಥಿಕ ಚಟುವಟಿಕೆಗಳಿರಲಿಲ್ಲ, ವಾಣಿಜ್ಯ ಹಾಗೂ ಕಾರ್ಖಾನೆಗಳ ಬೇಡಿಕೆಯೂ ಕಡಿಮೆಯಾಗಿತ್ತು.

Facebook Comments

Sri Raghav

Admin