ಮುಂಗಾರು ವಿಳಂಬ, ಜಲಾಶಯಗಳು ಖಾಲಿ ಖಾಲಿ : ಇಲ್ಲಿದೆ ಡ್ಯಾಮ್‌ಗಳ ನೀರಿನ ಮಟ್ಟದ ವಿವರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಮುಂಗಾರು ಆಗಮನ ವಿಳಂಬದಿಂದ ಈ ವರ್ಷ ಕರ್ನಾಟಕ ಜನತೆಗೆ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಆಗಸ್ಟ್, ಸೆಪ್ಟೆಂಬರ್ ವೇಳೆಗಷ್ಟೆ ಭರ್ತಿಯಾಗುವ ಸಾಧ್ಯತೆಯಿದೆ.

ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಬದಲಾವಣೆ ಆಗಿಲ್ಲ. ಪರಿಣಾಮ ಕುಡಿಯುವ ನೀರಿಗೆ ರಾಜ್ಯದಲ್ಲಿ ತೊಂದರೆಯಾಗುವ ಆತಂಕ ಎದುರಾಗಿದೆ.
ಮುಂದೆ ಉತ್ತಮ ಮಳೆ ಆದಲ್ಲಿ, ಆಗಸ್ಟ್ ತಿಂಗಳಲ್ಲಿಯೋ, ಸೆಪ್ಟೆಂಬರ್ ತಿಂಗಳಲ್ಲಿಯೋ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆ ಇದೆ. ಮುಂದಿನ 10 ದಿನದಲ್ಲಿ ಉತ್ತಮ ಮಳೆ ಆಗದಿದ್ದರೆ, ಬಿತ್ತನೆ ಕಾರ್ಯವನ್ನು ರೈತರು ಕೈಬಿಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಮಂಡ್ಯದ ಕೆಆರ್‍ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ.

ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸುತ್ತದೆ. ನಂತರ ಕೆಲ ದಿನಗಳಲ್ಲಿ ಕರ್ನಾಟಕ ಕಾಲಿಡುತ್ತದೆ. ಈ ವರ್ಷ ಅದು ಏಳು ದಿನ ತಡವಾಗಿ ಆಗಮಿಸಿದ್ದು ಇನ್ನೂ ರಾಜ್ಯಾದ್ಯಂತ ಮುಂಗಾರು ಮಳೆ ಪಸರಿಸಿಲ್ಲ. ಈ ವರ್ಷ ವಿಶೇಷವಾಗಿ ವಿಳಂಬವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
ರಾಜ್ಯದಲ್ಲಿ ಇದುವರೆಗೆ ಶೇ.10ರಷ್ಟು ಬಿತ್ತನೆ ಕಾರ್ಯವಾಗಿಲ್ಲ. ಮಹಾರಾಷ್ಟ್ರ 1 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ನೀರು ಬಿಟ್ಟ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಅವರು ಕೃಷ್ಣಾ ನದಿ ಬ್ಯಾರೇಜ್‍ಗಳಿಗೆ ಭೇಟಿ ಕೊಟ್ಟರು.

ಬರದಲ್ಲಿ ಬಾರದ ಸಚಿವರು ಈಗ್ಯಾಕೆ ಬಂದರು ಅಂತ ಕಾಗವಾಡದ ಜನ ಸಿಟ್ಟಿಗೆದ್ದು ಕಾರಿಗೆ ಮುತ್ತಿಗೆ ಹಾಕಿದರು. ಇತ್ತ ಟಿಬಿ ಡ್ಯಾಂ ತುಂಬಲೆಂದು ಪ್ರಾರ್ಥಿಸಿ ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಉಪವಾಸ ವ್ರತ ಕೈಗೊಂಡಿದ್ದಾರೆ. ಮುಂದಿನ ನಾಲ್ಕೈದು ದಿನ ರಾಜ್ಯದಲ್ಲಿ ಉತ್ತಮ ಮಳೆ ಆಗಲಿದ್ದು, ನಂತರ ದುರ್ಬಲವಾಗಲಿದೆ.

ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್ ಮೊದಲ ವಾರದಲ್ಲಿ ಕೆಆರ್ ಎಸ್ ಜಲಾಶಯದಲ್ಲಿ ಇನ್ನೂ ನೀರಿನ ಮಟ್ಟ ಕನಿಷ್ಠ ಮಟ್ಟದಲ್ಲಿದೆ. ಮುಂದಿನ ದಿನಗಳಲ್ಲಿ ಮಳೆ ಚೆನ್ನಾಗಿ ಸುರಿದರೆ ಮಾತ್ರ ಆಗಸ್ಟ್ ತಿಂಗಳ ಕೊನೆಗೆ ಕೆಆರ್‍ಎಸ್ ಜಲಾಶಯ ತುಂಬಬಹುದು ಎನ್ನುತ್ತಾರೆ ನೀರಾವರಿ ಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಎಸ್ ರಾಜಾ ರಾವ್. ಇಲ್ಲಿ ಸರಿಯಾಗಿ ಮಳೆ ಸುರಿಯದಿದ್ದರೆ ಕೆಆರ್‍ಎಸ್‍ನಿಂದ ತಮಿಳು ನಾಡಿಗೆ ನೀರು ಕಳುಹಿಸುವುದು ಹೇಗೆ? ಕಬಿನಿ ಜಲಾಶಯ ಕೂಡ ಸರಿಯಾಗಿ ತುಂಬಿಲ್ಲ ಎನ್ನುತ್ತಾರೆ .

ಜೂನ್ ತಿಂಗಳಲ್ಲಿ ಕರ್ನಾಟಕ ನೆರೆ ರಾಜ್ಯಕ್ಕೆ 9.19 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ ಕುಡಿಯುವ ನೀರಿಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಇನ್ನು ಉಳಿದ ಬೇಸಾಯಕ್ಕೆ ನೀರು ಬಿಡುವುದೆಲ್ಲಿಗೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯ ನೀರಿಗಾಗಿ ನೆರೆಯ ಮಹಾರಾಷ್ಟ್ರವನ್ನು ನಂಬಿಕೊಂಡಿದೆ. ಅಲ್ಲಿ ಚೆನ್ನಾಗಿ ಮಳೆಯಾದರೆ ಸೆಪ್ಟೆಂಬರ್ ವೇಳೆಗೆ ಭರ್ತಿಯಾಗಬಹುದು. ಈ ವರ್ಷ ತುಂಗಭದ್ರಾ ಜಲಾಶಯ ತುಂಬುತ್ತದೆಯೇ, ಇಲ್ಲವೇ ಎಂದು ನಮಗೆ ಆತಂಕವಿದೆ ಎನ್ನುತ್ತಾರೆ ಅಧಿಕಾರಿಗಳು.

ಕರ್ನಾಟಕ ರಾಜ್ಯ ನೈಸರ್ಗಿಕ ಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈ ಮಧ್ಯೆ ಆದಷ್ಟು ಬೇಗ ಮೋಡ ಬಿತ್ತನೆ ಮಾಡಲಾಗುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಇಂದು ಉಡುಪಿ, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಯಲ್ಲಿ ಮಳೆಯಾಗಿದೆ. ಬೀದರ್‍ನಲ್ಲಿ ಪಟಾಕಿ ಸಿಡಿಸಿ ಮಳೆಯನ್ನು ಸ್ವಾಗತಿಸಿದ್ದಾರೆ.

# ಜಲಾಶಯಗಳಲ್ಲಿ ನೀರಿನ ಮಟ್ಟ : 
ಲಿಂಗನಮಕ್ಕಿ ಡ್ಯಾಂ ಸಂಗ್ರಹ ಸಾಮಥ್ರ್ಯ 151.75 ಟಿಎಂಸಿ, ಇಂದಿನ ಸಾಮಥ್ರ್ಯ 14.07 ಟಿಎಂಸಿ, ವರ್ಷದ ಹಿಂದೆ -34.08 ಟಿಎಂಸಿ
ಕೆಆರ್‍ಎಸ್ ಡ್ಯಾಂ ಸಂಗ್ರಹ ಸಾಮಥ್ರ್ಯ 45.05 ಟಿಎಂಸಿ, ಇಂದಿನ ಸಾಮಥ್ರ್ಯ 6.34 ಟಿಎಂಸಿ, ವರ್ಷದ ಹಿಂದೆ 21.58 ಟಿಎಂಸಿ
ತುಂಗಭದ್ರಾ ಡ್ಯಾಂ ಸಂಗ್ರಹ ಸಾಮಥ್ರ್ಯ 100.86 ಟಿಎಂಸಿ, ಇಂದಿನ ಸಾಮಥ್ರ್ಯ 2.10 ಟಿಎಂಸಿ, ವರ್ಷದ ಹಿಂದೆ 25.07 ಟಿಎಂಸಿ
ಆಲಮಟ್ಟಿ ಡ್ಯಾಂ ಸಂಗ್ರಹ ಸಾಮಥ್ರ್ಯ 119.26 ಟಿಎಂಸಿ, ಇಂದಿನ ಸಾಮಥ್ರ್ಯ 17.67 ಟಿಎಂಸಿ, ವರ್ಷದ ಹಿಂದೆ -17.93 ಟಿಎಂಸಿ
ಕಬಿನಿ ಡ್ಯಾಂ ಸಂಗ್ರಹ ಸಾಮಥ್ರ್ಯ 15.67 ಟಿಎಂಸಿ, ಇಂದಿನ ಸಾಮಥ್ರ್ಯ 2.23 ಟಿಎಂಸಿ, ವರ್ಷದ ಹಿಂದೆ -14.58 ಟಿಎಂಸಿ
ಹಾರಂಗಿ ಡ್ಯಾಂ ಸಂಗ್ರಹ ಸಾಮಥ್ರ್ಯ 8.07 ಟಿಎಂಸಿ, ಇಂದಿನ ಸಾಮಥ್ರ್ಯ -1.17 ಟಿಎಂಸಿ, ವರ್ಷದ ಹಿಂದೆ -3.09 ಟಿಎಂಸಿ
ಹೇಮಾವತಿ ಡ್ಯಾಂ ಸಂಗ್ರಹ ಸಾಮಥ್ರ್ಯ -35.76 ಟಿಎಂಸಿ, ಇಂದಿನ ಸಾಮಥ್ರ್ಯ -3.47 ಟಿಎಂಸಿ, ವರ್ಷದ ಹಿಂದೆ -18.89 ಟಿಎಂಸಿ
ಘಟಪ್ರಭ ಡ್ಯಾಂ ಸಂಗ್ರಹ ಸಾಮಥ್ರ್ಯ-100.86 ಟಿಎಂಸಿ, ಇಂದಿನ ಸಾಮಥ್ರ್ಯ-2.10 ಟಿಎಂಸಿ, ವರ್ಷದ ಹಿಂದೆ -25.07 ಟಿಎಂಸಿ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ