ಇಸ್ರೇಲ್’ನ ಟೆಲ್ ಅವಿವ್‍ನಲ್ಲಿ ಚಿತ್ರರಸಿಕರಿಗಾಗಿ ವಾಟರ್ ಥಿಯೇಟರ್

ಈ ಸುದ್ದಿಯನ್ನು ಶೇರ್ ಮಾಡಿ

ಟೆಲ್-ಅವಿವ್(ಇಸ್ರೇಲ್), ಸೆ.11- ಮಾರಕ ಕೊರೊನಾ ಹಾವಳಿ ನಂತರ ಇಸ್ರೇಲ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಹಾಗೆಯೇ ಸಿನಿಮಾ ವೀಕ್ಷಣೆ ಚಟುವಟಿಕೆಗಳೂ ಆರಂಭವಾಗಿವೆ. ಚಿತ್ರರಸಿಕರಿಗಾಗಿ ರಾಜಧಾನಿ ಟೆಲ್ ಅವಿವ್‍ನಲ್ಲಿ ಹೊಸ ಪರಿಕಲ್ಪನೆಯ ತೇಲುವ ಸಿನಿಮಾ ಮಂದಿರ ವಿಶೇಷ ಗಮನ ಸೆಳೆದಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಂತರ ಇದೀಗ ಟೆಲ್ ಅವಿವ್‍ನಲ್ಲೂ ವಾಟರ್ ಥಿಯೇಟರ್ ಆರಂಭಗೊಂಡಿರುವುದು ಚಿತ್ರರಸಿಕರಿಗೆ ಸಂತಸ ನೀಡಿದೆ. ಕೋವಿಡ್-19 ಆರ್ಭಟ ಮತ್ತು ಸಾವು-ನೋವಿನ ನಂತರ ಇಸ್ರೇಲ್ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ. ಲಾಕ್‍ಡೌನ್ ತೆರವುಗೊಂಡಿದ್ದರೂ, ಒಳಾಂಗಣ ಚಿತ್ರಮಂದಿರಗಳು ಬಂದ್ ಆಗಿವೆ.

ಹೀಗಾಗಿ ಡ್ರೈವ್ ಇನ್ ಸಿನಿಮಾಗಳ ಪ್ರಯೋಗ ನಡೆಯುತ್ತಿದೆ. ರಾಜಧಾನಿ ಟೆಲ್-ಅವಿವ್‍ನ ಯಾರ್ಕೋನ್ ಪಾರ್ಕ್ ಲೇಕ್‍ನಲ್ಲಿ ದೇಶದ ಪ್ರಥಮ ತೇಲುವ ಸಿನಿಮಾ ಆರಂಭವಾಗಿದೆ. ಈ ಸರೋವರದಲ್ಲಿ ವಿಶೇಷ ಬಯಲು ಚಿತ್ರಮಂದಿರದ ವ್ಯವಸ್ಥೆಯಾಗಿದೆ. ಸಿನಿಮಾ ಪ್ರೇಮಿಗಳು ದೋಣಿಗಳಲ್ಲಿ ಕುಳಿತು ಚಲನಚಿತ್ರ ವೀಕ್ಷಿಸಬಹುದು.

ಈ ಸೈಲ್-ಇನ್-ಸಿನಿಮಾ ಟೆಲ್ ಅವಿವ್ ನಗರಸಭೆಯ ಹೊಸ ಪರಿಕಲ್ಪನೆ. ಇದು ದೇಶದ ಪ್ರಥಮ ತೇಲುವ ಸಿನಿಮಾ ಮಂದಿರ ಎನಿಸಿದೆ. ಈ ಸರೋವರವನ್ನು ಬೋಟ್ ಡ್ರೈವ್ ಇನ್ ಸಿನಿಮಾ ಆಗಿ ಪರಿವರ್ತಿಸಲಾಗಿದೆ. ಲೇಕ್‍ನ ಒಂದು ತುದಿಯಲ್ಲಿ ಬೃಹತ್ ಪರದೆಯನ್ನು ಅಳವಡಿಸಲಾಗಿದೆ.

ಜನರು 70 ಪೆಡಲ್ ಬೋಟ್‍ಗಳು ಮತ್ತು ಹಾಯಿ ದೋಣಿಗಳಲ್ಲಿ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ. ದೋಣಿಗಳ ನಡುವೆ ಎರಡು ಮೀಟರ್ ಸಾಮಾಜಿಕ ಅಂತರ ನಿಯಮ ಕಡ್ಡಾಯಗೊಳಿಸಲಾಗಿದೆ.  ಆಗಸ್ಟ್ ಕೊನೆಯ ವಾರದಿಂದ ಪ್ರತಿ ಸಂಜೆ ಎರಡು ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಕಳೆದ ವಾರದ ಸೈಲ್ ಇನ್ ಸಿನಿಮಾ ಪ್ರದರ್ಶನದಲ್ಲಿ ಸುಮಾರು 200 ಮಂದಿ ತಮ್ಮ ಮೆಚ್ಚಿನ ಚಲನಚಿತ್ರ ವೀಕ್ಷಿಸಿದರು.

ಕೌಟುಂಬಿಕ ಹಾಸ್ಯಮಯ ಚಿತ್ರ ಪ್ಯಾಡಿಂಗ್‍ಟನ್-2 ಇಸ್ರೇಲಿಗಳಿಗೆ ಮಜ ನೀಡಿತು.  ಕಳೆದ ತಿಂಗಳು ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನ ಸೀನ್ ನದಿಯಲ್ಲಿ ಬೋಟ್ ಡ್ರೈವ್ ಇನ್ ವಾಟರ್ ಥಿಯೇಟರ್ ಆರಂಭವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments