ಪಶ್ಚಿಮ ಬಂಗಾಳ ವೈದ್ಯರ ಮುಷ್ಕರ 5ನೇ ದಿನಕ್ಕೆ, 450ಕ್ಕೂ ಹೆಚ್ಚು ಡಾಕ್ಟರ್ಸ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಜೂ.15- ಪಶ್ಚಿಮ ಬಂಗಾಳದಲ್ಲಿ ವೈದ್ಯರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ.  ಸಂಧಾನಕ್ಕೆ ಜಗ್ಗದ ವೈದ್ಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರ ಗೊಳಿಸಿದ್ದು, ಈ ವರೆಗೆ ಸುಮಾರು 450ಕ್ಕೂ ಹೆಚ್ಚು ಡಾಕ್ಟರ್‍ಗಳು ರಾಜಿನಾಮೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರೆದಿರುವಂತೆಯೇ ವೈದ್ಯರ ರಾಜೀನಾಮೆಯ ಪ್ರಹಸನಗಳು ತೀವ್ರಗೊಂಡಿವೆ. ನಿನ್ನೆಯಿಂದ ಈ ತನಕ ಬಂಗಾಳದಾದ್ಯಂತ ಸುಮಾರು 450ಕ್ಕೂ ಹೆಚ್ಚು ವೈದ್ಯರ ರಾಜಿನಾಮೆ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ವೈದ್ಯರ ಸಮಸ್ಯೆಗಳು, ಸಿಬ್ಬಂದಿ ಕೊರತೆಯ ಹೊರತಾಗಿಯೂ ನಾವು ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಅದಾಗ್ಯೂ ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ನಮ್ಮ ಧೈರ್ಯವನ್ನೇ ಕುಂದಿಸಿದೆ. ಹೀಗಾಗಿ ವೈದ್ಯರ ಭದ್ರತೆಗೆ ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳುವವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿ 450ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿದ್ದಾರೆ.

ವೈದ್ಯರ ರಾಜೀನಾಮೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ವೈದ್ಯರ ಬಗ್ಗೆ ಕೀಳಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರೇ ಎನ್‍ಆರ್‍ಎಸ್ ಆಸ್ಪತ್ರೆಗೆ ಬಂದು ನಮ್ಮನ್ನು ಭೇಟಿ ಮಾಡಬೇಕು, ಕ್ಷಮೆ ಕೇಳಬೇಕು ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

ನಿನ್ನೆ ಕೋಲ್ಕತ್ತದ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ತೆರಳಿದ್ದ ಮಮತಾ ಬ್ಯಾನರ್ಜಿ, ವೈದ್ಯರನ್ನು ಸಂಧಾನಕ್ಕೆ ಕರೆದರೆ ಅವರು, ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ಪ್ರತಿಭಟನೆ ಮಾಡುತ್ತಿರುವವ ವೈದ್ಯರೆಲ್ಲ ಬಂಗಾಳದವರಲ್ಲ, ಅವರೆಲ್ಲ ಹೊರಗಿನಿಂದ ಬಂದವರು.

ರಾಜ್ಯದಲ್ಲಿ ಶಾಂತಿ ಕದಡಲು ಬಿಜೆಪಿ ಮತ್ತು ಸಿಪಿಎಂ ಮಾಡುತ್ತಿರುವ ಕುತಂತ್ರ ಇದು ಎಂದು ಆರೋಪಿಸಿದ್ದರು. ಇಂದು ಕೂಡಾ ಪಶ್ಚಿಮ ಬಂಗಳಾದಲ್ಲಿ ವಿವಿಧೆಡೆ ವೈದ್ಯರ ಮುಷ್ಕರ ಮುಂದುವರೆದಿದ್ದು, ಸೋಮವಾರ ವೈದ್ಯರ ಪ್ರತಿಭಟನೆಗೆ ಕರೆ ನೀಡಲಾಗಿದೆ.

Facebook Comments

Sri Raghav

Admin