ಭಾರತ-ಪಾಕ್ ಗಡಿಯಲ್ಲಿ ಭಾರಿ ಸ್ಪೋಟಕ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚಂಡಿಗಢ,ಅ.20-ಪಂಜಾಬ್‍ನಲ್ಲಿರುವ ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಮದ್ದು,ಗುಂಡು, ಸಶಸ್ತ್ರಗಳು ಹಾಗೂ ಮಾದಕ ದ್ರವ್ಯ ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಗಿದೆ. 22 ಪಿಸ್ತೂಲ್‍ಗಳು, 44 ಮ್ಯಾಗಜಿನ್‍ಗಳು, 100 ಸುತ್ತು ಸ್ಪೋಟಕ ವಸ್ತುಗಳು ಹಾಗೂ ಒಂದು ಕೇಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ತರ್ನ್ ತರನ್ ಜಿಲ್ಲೆಯ ಖೇಮ್ಕಾರನ್ ಪ್ರದೇಶದ ಗಡಿ ಪ್ರದೇಶದಲ್ಲಿ ಉಗ್ರರು ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು.
ಬಂದ ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಚರಣೆ ನಡೆಸಿದ ಭದ್ರತಾ ಪಡೆಗಳು ಹಾಗೂ ಪಂಜಾಬ್ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾವ ಸಂಘಟನೆಗೆ ಸೇರಿದ ಉಗ್ರರು ಸ್ಪೋಟಕಗಳನ್ನು ಅಡಗಿಸಿಟ್ಟಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ನೆರೆಯ ಪಾಕ್‍ನಿಂದ ಕಳ್ಳಸಾಗಾಣಿಕೆ ಮೂಲಕ ಹಾಗೂ ಮಾದಕ ದ್ರವ್ಯಗಳನ್ನು ಗಡಿಯೊಳಗೆ ಸಾಗಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಉಗ್ರರ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಕಾಶ್ಮೀರ ಕಣಿವೆಯ ಗಡಿಗಳಲ್ಲಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿರುವ ಹಿನ್ನಲೆಯಲ್ಲಿ ಪಂಜಾಬ್ ಗಡಿ ಮೂಲಕ ವಿಧ್ವಂಸಕ ವಸ್ತುಗಳನ್ನು ಭಾರತದೊಳಗೆ ಸಾಗಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ.

Facebook Comments