ರಾಜ್ಯದಲ್ಲಿ ಇನ್ನು 3 ದಿನ ಮುಂದುವರೆಯಲಿದೆ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13-ಕಳೆದೊಂದು ವಾರದಿಂದ ಮುಂಗಾರು ಮಳೆ ರಾಜ್ಯದಲ್ಲಿ ಚುರುಕಾಗಿದ್ದು, ಇನ್ನೂ ಮೂರು ದಿನ ಮುಂದುವರೆಯುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರೆ, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣ ಇಲ್ಲವೆ ಹಗುರ ಮಳೆಯಾಗಿದೆ.

ಮುಂಗಾರು ಮಳೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿರುವುದರಿಂದ ಇನ್ನೂ ಮೂರು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ನಾಳೆ ವೇಳೆಗೆ ಉಂಟಾಗುವ ಸಾಧ್ಯತೆ ಇದೆ. ನಂತರ ಇದು ಆಂಧ್ರ ಪ್ರದೇಶದ ಕರಾವಳಿ ಕಡೆಗೆ ಚಲಿಸುವ ಸಂಭವ ಇರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಬಹುದು. ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಟ್ರಪ್ ನಿರ್ಮಾಣವಾಗಿದೆ. ಅಲ್ಲದೆ, ಮಳೆಗೆ ಪೂರಕವಾದ ಸನ್ನಿವೇಶಗಳು ಉಂಟಾಗಿವೆ.

ಇದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಇದರಿಂದ ಇನ್ನೆರಡು ದಿನ ಆಗಾಗ್ಗೆ ಹಗುರ ಇಲ್ಲವೆ ಸಾಧಾರಣ ಮಳೆ ಮುಂದುವರೆಯಲಿದೆ. ಆ ನಂತರ ಮಳೆ ಇಳಿಮುಖವಾದರೂ ಮತ್ತೆ ಸೆ. 21ರ ವೇಳೆಗೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಮಳೆ ಮುಂದುವರೆಯುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಹೇಳಿದರು.

ನಿನ್ನೆ ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲೂ ಮಳೆ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ದಿಂದಲೂ ಆಗಾಗ್ಗೆ ಮಳೆ ಬರುತ್ತಿದೆ. ಇದೇ ಪರಿಸ್ಥಿತಿ ಇನ್ನೆರಡು ದಿನ ಮುಂದುವರೆಯುವ ಸಾಧ್ಯತೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.

Facebook Comments