ರಾಜ್ಯದಲ್ಲಿ ನ.22ರಿಂದ ಮೂರು ದಿನ ಭಾರಿ ಮಳೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಕಳೆದ ಒಂದು ವಾರದಿಂದ ದುರ್ಬಲಗೊಂಡಿದ್ದ ಹಿಂಗಾರು ಮಳೆ ಮಂಗಳವಾರದಿಂದ ಮತ್ತೆ ಚೇತರಿಕೆಯಾಗುವ ಮುನ್ಸೂಚನೆಗಳಿವೆ. ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಕೊಯ್ಲು ಸಂದರ್ಭದಲ್ಲಿ ಮಳೆ ಬರುವುದರಿಂದ ರೈತರಿಗೆ ಸಾಕಷ್ಟು ಹಾನಿ ಉಂಟಾಗಲಿದೆ. ಆದರೆ, ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಕಡ್ಲೆ, ಕೊತ್ತಂಬರಿ, ಹುರುಳಿ ಮತ್ತಿತರ ಬೆಳೆಗಳಿಗೆ ಅನುಕೂಲವಾಗಲಿದೆ.

ಬಂಗಾಳಕೊಲ್ಲಿಯಲ್ಲಿ ತೀವ್ರ ಸ್ವರೂಪದ ವಾಯುಭಾರ ಕುಸಿತ ಉಂಟಾಗಲಿದ್ದು, ನವೆಂಬರ್ 24ರಿಂದ 26ರ ವರೆಗೆ ಮೂರು ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಶ್ರೀಲಂಕಾ ಬಳಿ ಈಗಾಗಲೇ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನೆರಡು ದಿನಗಳಲ್ಲಿ ಅದು ತೀವ್ರ ಸ್ವರೂಪ ತಾಳುವ ಸಾಧ್ಯತೆಗಳಿವೆ. ಆದರೆ, ಚಂಡಮಾರುತವಾಗಿ ಪರಿವರ್ತನೆಯಾಗುವ ಸಂಭವ ಕಡಿಮೆ ಇದೆ. ತೀವ್ರ ಸ್ವರೂಪದ ವಾಯುಭಾರ ಕುಸಿತದ ಪರಿಣಾಮ ನವೆಂಬರ್ 24ರಂದು ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ನಾಳೆ ಸಂಜೆಯಿಂದಲೇ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಮಂಗಳವಾರ ಜಿಟಿ ಜಿಟಿ ಮಳೆಯಾಗಬಹುದು. ನವೆಂಬರ್ 25ರಂದು ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಆದರೆ, ಕೆಲವು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದರು.

ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ತೀವ್ರ ಸ್ವರೂಪದ ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಟ್ಟಿದೆ. ಆದರೆ, ಅದು ಓಮನ್ ಕಡೆ ಚಲಿಸುತ್ತಿರುವುದರಿಂದ ರಾಜ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಆದರೆ, ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನವೆಂಬರ್ 24 ರಿಂದ 26ರ ವರೆಗೆ ಮೂರು ದಿನಗಳ ಕಾಲ ಮಳೆಯಾಗುವುದರಿಂದ ಮುಂಗಾರು ಹಂಗಾಮಿನ ರಾಗಿ, ಭತ್ತ, ಜೋಳ, ಹಲಸಂದೆ, ಉದ್ದು, ಹೆಸರು ಮೊದಲಾದ ಬೆಳೆಗಳ ಕೊಯ್ಲು ಮಾಡುತ್ತಿರುವ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಫಸಲನ್ನು ಸಂರಕ್ಷಣೆ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ಸಲಹೆ ಮಾಡಿದ್ದಾರೆ.

Facebook Comments