ಖತರ್ನಾಕ್ ಹ್ಯಾಕರ್ ಶ್ರೀಕಿ ಬಂಧನ : ಈ ಕಿಲಾಡಿ ಏನೆಲ್ಲಾ ಮಾಡ್ತಿದ್ದ ಗೊತ್ತೇ..?
ಬೆಂಗಳೂರು, ನ.18- ಡ್ರಗ್ಸ್ ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ಮಾದಕ ವೆಸನಿ ಅಂತಾರಾಷ್ಟ್ರೀಯ ವೆಬ್ಸೈಟ್ ಹ್ಯಾಕರ್ನನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರದ ಹಲವು ವೆಬ್ಸೈಟ್ಗಳ ಹ್ಯಾಕಿಂಗ್ ರಹಸ್ಯವನ್ನು ಭೇದಿಸಿದ್ದಾರೆ. ಡ್ರಗ್ಸ್ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಡಾರ್ಕ್ ವೆಬ್ ಬಳಕೆ ಹಾಗೂ ವೆಬ್ಸೈಟ್ ಹ್ಯಾಕಿಂಗ್ನಲ್ಲಿ ಪಳಗಿದ ಜಯನಗರದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(25)ಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲ್ಯಾಪ್ಟಾಪ್ ಹಾಗೂ ಇಂಟರ್ನೆಟ್ ಬಳಸಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದ ಶ್ರೀಕೃಷ್ಣನ ಬಂಧನದಿಂದ ಕರ್ನಾಟಕ ಸರ್ಕಾರದ ಇ-ಪ್ರೋಕ್ಯೂರ್ಮೆಂಟ್ ವೆಬ್ಸೈಟ್ ಹ್ಯಾಕ್ನ ಪ್ರಕರಣದ ಆರೋಪಿ ಪತ್ತೆಯಾದಂತಾಗಿದೆ.
# ಹಿನ್ನೆಲೆ:
ವಿದೇಶದಿಂದ ಅಂಚೆ ಮುಖಾಂತರ ನ.4ರಂದು ಬಂದಿದ್ದ ಹೈಡ್ರೋಗಾಂಜಾವನ್ನು ಪಡೆದುಕೊಳ್ಳಲು ಚಾಮರಾಜಪೇಟೆ ಫಾರಿನ್ಫೋಸ್ಟ್ ಆಪೀಸ್ಗೆ ಬಂದಿದ್ದ ಆರೋಪಿ ಸದಾಶಿವನಗರದ ಎಂ.ಸುಜಯ್ನನ್ನು ವಶಕ್ಕೆ ಪಡೆದು ಆತನಿಂದ 500 ಗ್ರಾಂ ತೂಕದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಕೆಂಪೇಗೌಡ ಫೋಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಆ್ಯಕ್ಟ್ ಪ್ರಕಾರ ಕೇಸು ದಾಖಲಿಸಿ ತನಿಖೆ ಮುಂದುವರೆಸಿದಾಗ ಹೇಮಂತ್ ಮುದ್ದಪ್ಪ, ಸುನೀಶ್ ಹೆಗ್ಡೆ, ಪ್ರಸಿದ್ಶೆಟ್ಟಿ ಸೇರಿ 7 ಮಂದಿಯನ್ನು ಬಂಧಿಸಲಾಗಿತ್ತು.
ನಂತರ ಹೆಚ್ಚಿನ ವಿಚಾರಣೆಗಾಗಿ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ವಿಚಾರಣೆ ವೇಳೆ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿ ಅವರು ಸೋದರ ಸಂಬಂಧಿಗಳಾಗಿದ್ದು, ಪ್ರಸಿದ್ ಶೆಟ್ಟಿ ಹೆಚ್ಚಿನ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಡಾರ್ಕ್ ವೆಬ್ ಮುಖಾಂತರ ಹೈಡ್ರೋಗಾಂಜಾ ತರಿಸುತ್ತಿದ್ದ. ಅದಕ್ಕೆ ಬಿಟ್ಕಾಯಿನ್ ಮೂಲಕ ಹಣ ಪಾವತಿಸಲು ಶ್ರೀಕೃಷ್ಣನನ್ನು ಬಳಕೆ ಮಾಡಿಕೊಳ್ಳುತ್ತಿದ್ದ.
ವಿದೇಶದಿಂದ ಬಂದ ಗಾಂಜಾವನ್ನು ಚಾಮರಾಜಪೇಟೆಯ ವಿದೇಶಿ ಅಂಚೆ ಶಾಖೆಯಿಂದ ಹೇಮಂತ್ ಬಿಡಿಸಿಕೊಂಡು ಬರುತ್ತಿದ್ದ. ಅದನ್ನು ಸುನೀಶ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಶ್ರೀಕೃಷ್ಣ ಹಾಗೂ ಇತರರು ಸಂಜಯ್ನಗರದಲ್ಲಿರವ ಪ್ರಸಿದ್ ಶೆಟ್ಟಿಯ ಪ್ಲಾಟ್ನಲ್ಲಿ ಸೇರಿ ಪಾರ್ಟಿ ಮಾಡಿ ಸೇವನೆ ಮಾಡುತ್ತಿದ್ದರು. ಜತೆಗೆ ಇತರರಿಗೂ ಸರಬರಾಜು ಮಾಡುತ್ತಿದ್ದರು. ನಿನ್ನೆ ಶ್ರೀಕೃಷ್ಣನ ಬಂಧನದ ಬಳಿಕ ಮತ್ತಷ್ಟು ಅಂಶಗಳು ಬಯಲಾಗಿದೆ.
# ಆರೋಪಿಯ ಹಿನ್ನೆಲೆ:
ಶ್ರೀಕೃಷ್ಣ ಬೆಂಗಳೂರಿನಲ್ಲಿ ಪಿಯುಸಿ ಓದಿದ್ದು, 2014ರಿಂದ 17ರವರೆಗೆ ನೆದರ್ಲ್ಯಾಂಡ್ನ ಅಮ್ಸ್ಟ್ರಾದಾಮ್ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಬೆಂಗಳೂರಿಗೆ ವಾಪಸ್ ಬಂದಿದ್ದಾನೆ. ಇಂಟರ್ನೆಟ್ ಬಳಕೆ, ಪ್ರೋಗ್ರಾಮಿಂಗ್ನಲ್ಲಿ ನಿಪುಣನಾಗಿದ್ದಾನೆ. ಮೊದಲು ರೂನೆಸ್ಕೆಪ್ ಎಂಬ ಆನ್ಲೈನ್ ಗೇಮ್ನನ್ನು ಹ್ಯಾಕ್ ಮಾಡಿದ್ದಾನೆ. ನಂತರ ಇಂಡಿಯನ್ ಫೋಕರ್ ವೆಬ್ಸೈಟ್, ಆನ್ಲೈನ್ ಬಿಟ್ಕಾಯಿನ್ಸ್ ಹಾಗೂ ಇತರೆ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಹಣ ಸಂಪಾದನೆ ಮಾಡುವ ಪ್ರವೃತ್ತಿಯನ್ನು ಮುಂದುವರೆಸಿದ್ದಾನೆ.
ಇತರ ಆರೋಪಿಗಳು ಹಾಗೂ ಶ್ರೀಕೃಷ್ಣನ ಜತೆಯಾಗಿ ದೇಶ-ವಿದೇಶಗಳ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುತ್ತಾರೆ ಎಂದು ತಿಳಿಸಲಾಗಿದೆ. 2019ರಲ್ಲಿ ಆರೋಪಿಗಳು ಕರ್ನಾಟಕ ಸರ್ಕಾರದ ಇ-ಪ್ರೋಕ್ಯೂರ್ಮೆಂಟ್ ವೆಬ್ಸೈಟನ್ನು ಹ್ಯಾಕ್ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಿಐಡಿ ಘಟಕದಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
2019ರಲ್ಲಿ ಆರೋಪಿಗಳು ಶ್ರೀಕೃಷ್ಣ ಮುಖಾಂತರ ವಿವಿಧ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿಸಿ ಬೇರೆ ಬೇರೆ ಆಟಗಾರರ ಕಾರ್ಡ್ಗಳನ್ನು ನೋಡಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ. ಕೆಲವು ವೆಬ್ಸೈಟ್ಗಳ ಡಾಟಾವನ್ನುಹ್ಯಾಕಿಂಗ್ ಮೂಲಕ ಸ್ಥಗಿತಗೊಳಿಸಿ ಮಾಲೀಕರನ್ನು ಸಂಪರ್ಕಿಸಿ ಬೆದರಿಸಿ, ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ. ಕೆಲವು ವೆಬ್ಸೈಟ್ಗಳ ಡಾಟಾವನ್ನು ಕಳವು ಮಾಡಿದ್ದಾರೆ.
ಆನ್ಲೈನ್ ಮುಖಾಂತರ ನಡೆಯುವ ಬಿಟ್ಕಾಯಿನ್ಗಳ ವರ್ಗಾವಣೆಯನ್ನೂ ಹ್ಯಾಕ್ ಮಾಡಿ ಬಿಟ್ಕಾಯಿನ್ಗಳನ್ನೂ ಸಂಪಾದಿಸಿದ್ದಾರೆ. ಹೇಮಂತ್, ಸುನೀಶ್, ಪ್ರಸಿದ್, ಸುಜಯ್ ಹಾಗೂ ಇತರರು ಜಿ.ಜಿ.ಫೋಕರ್ ಎಂಬ ಚೀನಾ ವೆಬ್ಸೈಟನ್ನು ಶ್ರೀಕೃಷ್ಣನ ಮುಖಾಂತರ ಹ್ಯಾಕ್ ಮಾಡಿಸಿ ಆ ಕಂಪೆನಿಯ ಹಣವನ್ನು ವರ್ಗಾವಣೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರಯತ್ನ ನಡೆಸಿದ್ದರು.
ಹ್ಯಾಕಿಂಗ್ ಪ್ರಯತ್ನದ ನಡುವೆಯೇ ಶ್ರೀಕೃಷ್ಣನನ್ನು ಲ್ಯಾಪ್ಟಾಪ್ ಸಮೇತ ಬಂಧಿಸಲಾಗಿದೆ. ಈ ಆರೋಪಿಗಳು ಚಿಕ್ಕಮಗಳೂರು, ಕಬಿನಿಯ ರೆಸಾರ್ಟ್, ಬೆಂಗಳೂರಿನ ಸ್ಟಾರ್ ಹೋಟೆಲ್ಗಳು, ರೆಸಾರ್ಟ್, ದೇವನಹಳ್ಳಿ ಬಳಿ ಇರುವ ಪ್ರಸಿದ್ ಶೆಟ್ಟಿ ಫಾರಂ ಹೌಸ್, ಸುನೀಶ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿಯ ಪ್ಲಾಟ್ಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಚಟಕ್ಕೆ ಸಿಲುಕಿ ಡಾರ್ಕ್ ವೆಬ್ ಮುಖಾಂತರ ಡ್ರಗ್ಸ್ ತರಿಸಲು ಅಕ್ರಮವಾಗಿ ಬಿಟ್ಕಾಯಿನ್ಗಳನ್ನು ಹ್ಯಾಕ್ ಮಾಡುತ್ತಿದ್ದ ಆರೋಪಿಗಳು ನಂತರ ಮುಂದುವರೆದ ಭಾಗದಲ್ಲಿ ಫೋಕರ್ ಗೇಮ್ ಅಪ್ಲಿಕೇಷನ್ಗಳನ್ನು ಹ್ಯಾಕ್ ಮಾಡಿ ಹಣ ಸಂಪಾದನೆ ಮಾಡಿದ್ದಾರೆ. ಈಗ ಸರ್ಕಾರದ ವೆಬ್ಸೈಟ್ಗಳನ್ನೇ ಹ್ಯಾಕ್ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕೆ.ಪಿ.ರವಿಕುಮಾರ್, ಎಸಿಪಿ ಗೌತಮ್, ಇನ್ಸ್ಪೆಕ್ಟರ್ ಶ್ರೀಧರ ಪೂಜಾರ ಅವರ ತಂಡ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.