“ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳೋ ಬದಲು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.29- ನಲವತ್ತು ವರ್ಷ ಮೇಲ್ಪಟ್ಟ ಪುರುಷರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಬದಲು ಮೆಡಿಕಲ್ ಚೆಕಪ್ ವಾರ್ಷಿಕೋತ್ಸವ ಆಚರಿಸಿಕೊಂಡರೆ ಹೃದಯಾಘಾತ ಆಗುವುದರಿಂದ ಬಚಾವ್ ಆಗಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಇಂದಿಲ್ಲಿ ಹೇಳಿದರು.

ಬಿಬಿಎಂಪಿ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಬಾಬು ಜಗಜೀವನರಾಮ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1960ರಲ್ಲಿ ಶೇ.3ರಷ್ಟಿದ್ದ ಹೃದಯಘಾತ ಪ್ರಕರಣಗಳು ಇತ್ತೀಚೆಗೆ ವಾಯುಮಾಲಿನ್ಯ ಹಾಗೂ ಆಧುನಿಕ ಪದ್ದತಿ ಅಭ್ಯಾಸಗಳಿಂದಾಗಿ ಶೇ.10ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ಹಿಂದೆ ಶ್ರೀಮಂತರಿಗೆ ಮಾತ್ರ ಹೃದಯರೋಗ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಈಗ ಎಲ್ಲಾ ಜನರಿಗೆ ಬರುತ್ತಿದೆ. ಅದರಲ್ಲೂ ಧೂಮಪಾನಿಗಳಲ್ಲಿ ಶೇ.51ರಷ್ಟು ಹೃದಯಾಘಾತ ಹೆಚ್ಚಳವಾಗಿದೆ. ಹಾಗಾಗಿ ಯುವ ಜನತೆ ಧೂಪಮಾನ ಮತ್ತು ತಂಬಾಕು ಸೇವನೆ ಕೈಬಿಡಬೇಕೆಂದು ತಿಳಿ ಹೇಳಿದರು.
ಇತ್ತೀಚೆಗೆ ನಮ್ಮ ಸಂಸ್ಥೆ ಒಂದು ಅಧ್ಯಯನ ಮಾಡಿತ್ತು. ಅದರಲ್ಲಿ ಲಾರಿ, ಬಸ್, ಆಟೋ ಚಾಲಕರಿಗೆ ಹೆಚ್ಚು ಹೃದಯಾಘಾತ ಆಗಿದೆ ಎಂಬುದು ಗೊತ್ತಾಗಿತ್ತು. ಇದಕ್ಕೆ ಪ್ರಮುಖ ಕಾರಣ ವಾಯುಮಾಲಿನ್ಯ. ಈಗ ವಾಯುಮಾಲಿನ್ಯ ಎಂಬುದು ಹೊಸ ತಂಬಾಕು ಆಗಿ ಮಾರ್ಪಟ್ಟಿದೆ. ಪ್ರತಿಯೊಬ್ಬರು ವಾಯುಮಾಲಿನ್ಯ ತಡೆಯಲು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಒಂದೇ ಜಾಗದಲ್ಲಿ ಸತತ 4 ಗಂಟೆಗಳ ಕಾಲ ಕುಳಿತು ಕೆಲಸ ಮಾಡಿದರೆ ಒಂದು ಸಿಗರೇಟ್ ಸೇದಿದಷ್ಟೇ ಸಮ. ಹಾಗಾಗಿ ಒಂದೇ ಕಡೆ ಕೂರುವ ಬದಲು ದುಡಿದು ತಿನ್ನಬೇಕು. ಶ್ರಮವಹಿಸಿದರೆ ಆಗ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು. ಬಿಪಿ, ಶುಗರ್, ಕೊಲೆಸ್ಟ್ರಾಲ್, ತೂಕ ಹೆಚ್ಚಳ, ಸೊಂಟದ ಸುತ್ತಳತೆಯಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದರ ಜೊತೆಗೆ ಅತಿಯಾಸೆಯನ್ನು ಬಿಡಬೇಕು. ಆಗ ಹೃದಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಹೃದಯದ ಎಡಭಾಗ ಅಥವಾ ಪಕ್ಕದಲ್ಲಿ ನೋವು ಇದ್ದರೆ ಹೃದಯಾಘಾತದ ಲಕ್ಷಣ ಎಂದು ಭಾವಿಸಲಾಗುತ್ತಿತ್ತು. ಈಗ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬಂದು ವಾಂತಿಯಾಗುವುದು, ದವಡೆ ನೋವು, ಬೆನ್ನು ನೋವು ಬಂದರೂ ಹೃದಯಾಘಾತ ಆಗಿರುವುದು ಕಂಡುಬಂದಿದೆ. ಹಾಗಾಗಿ ಈ ಬಗ್ಗೆ ಅಸಡ್ಡೆ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.

ಪ್ರತಿದಿನ ವ್ಯಾಯಾಮ ಮಾಡಬೇಕು, ಶ್ರಮಪಟ್ಟು ಕೆಲಸ ಮಾಡಬೇಕು, 40 ವರ್ಷ ಮೇಲ್ಪಟ್ಟ ಪುರುಷರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರೆ ಹೃದಯಾಘಾತದಿಂದ ಪಾರಾಗಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ಡಾ.ಹರೀಶ್ ಕುನಾರ್, ಜಂಟಿ ಆಯುಕ್ತ ಸರ್ಫರಾಜ್ ಖಾನ್, ಮುಖ್ಯ ಆರೋಗ್ಯಾಕಾರಿ ಡಾ.ವಿಜಯೇಂದ್ರ, ಡಾ.ನಿರ್ಮಲ ಬುಗ್ಗಿ ಮತ್ತಿತರರು ಪಾಲ್ಗೊಂಡಿದ್ದರು.

Facebook Comments