ಮುಂದಿನ ವಾರದಿಂದ 2 ದಿನ ವೀಕೆಂಡ್ ಲಾಕ್‍ಡೌನ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.11- ರಾಜ್ಯದಲ್ಲಿ ಮಿತಿಮೀರುತ್ತಿರುವ ಕೊರೊನಾ ಅಟ್ಟಹಾಸ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಈಗಾಗಲೇ ಭಾನುವಾರ ಲಾಕ್‍ಡೌನ್ ಜಾರಿಗೊಳಿಸಿರುವ ಸರ್ಕಾರ ಮುಂದಿನ ವಾರದಿಂದ ವಾರದಲ್ಲಿ ಎರಡು ದಿನ ಅಂದರೆ ಶನಿವಾರ, ಭಾನುವಾರ ವೀಕೆಂಡ್ ಲಾಕ್‍ಡೌನ್ ಮಾಡುವ ಚಿಂತನೆ ನಡೆಸಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾಕಷ್ಟು ಕ್ರಮ ಕೈಗೊಳ್ಳುವುದರ ನಡುವೆಯೂ ಕೂಡ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿದಿನ ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲೂ ಕೂಡ ಸೋಂಕಿನ ಪ್ರಮಾಣ ಮಿತಿಮೀರಿ ವ್ಯಾಪಿಸುತ್ತಿದೆ.

ನಿನ್ನೆಯಷ್ಟೆ 1433 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದವು. ಸಾವಿನ ಸಂಖ್ಯೆ ರಾಜ್ಯದಲ್ಲಿ 500 ದಾಟಿದೆ. ಇದರ ಪ್ರಮಾಣವೂ ಕೂಡ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

15 ದಿನಗಳ ಕಾಲ ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಮಾಡಿ ಕೊರೊನಾ ಸೋಂಕು ನಿಯಂತ್ರಿಸಬೇಕೆಂದು ಪ್ರತಿಪಕ್ಷಗಳ ನಾಯಕರು, ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆಗಳು ಕೂಡ ಸಕ್ರಿಯವಾಗಿರಬೇಕÉಂಬ ನಿಟ್ಟಿನಲ್ಲಿ ಭಾನುವಾರ ಒಂದು ದಿನ ಮಾತ್ರ ಲಾಕ್‍ಡೌನ್ ಘೋಷಣೆ ಮಾಡಿದೆ. ಆದರೆ, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಬೇಕೆಂಬ ಚಿಂತನೆ ನಡೆಸಿದೆ.

ಈಗಾಗಲೇ ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ ಐದು ದಿನಗಳು ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದೆ. ಶಿಕ್ಷಕರಿಗೂ ಕೂಡ ಭಾನುವಾರದ ಜತೆಗೆ ಶನಿವಾರವೂ ಕೂಡ ರಜೆ ಘೋಷಿಸಿದೆ.

ಕೊರೊನಾ ನಿಯಂತ್ರಣಕ್ಕೆ ರಾತ್ರಿ ಕಫ್ರ್ಯೂ ವಿಧಿಸಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲ ವಹಿವಾಟುಗಳನ್ನೂ ಕೂಡ ಸ್ಥಗಿತಗೊಳಿಸಿದೆ. ಈ ಎಲ್ಲ ಕ್ರಮದ ನಡುವೆಯೂ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಲಾಕ್‍ಡೌನ್ ವಿಧಿಸುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮುಂದಿನ ವಾರದಿಂದ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ವೀಕೆಂಡ್ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಾಗಿರುತ್ತದೆ.

ಸೋಂಕು ವ್ಯಾಪಿಸುವ ಸಾಧ್ಯತೆ ಇರುತ್ತದೆ. ಈ ಚೈನ್‍ಲಿಂಕ್ ಕಟ್ ಮಾಡಲು ಈ ಕ್ರಮ ಕೈಗೊಳ್ಳಬೇಕೆಂದು ಹಲವು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ನರ್ಸ್‍ಗಳು, ಪೊಲೀಸರನ್ನೂ ಬಿಟ್ಟಿಲ್ಲ. ಜತೆಗೆ ಜನಪ್ರತಿನಿಧಿಗಳು ಕೂಡ ಸೋಂಕಿನಿಂದ ನರಳುತ್ತಿದ್ದಾರೆ. ನಿನ್ನೆಯಿಂದ ಸರ್ಕಾರ ಎಲ್ಲ ಸಚಿವರುಗಳಿಗೆ ಕೊರೊನಾ ನಿಯಂತ್ರಣದ ಉಸ್ತುವಾರಿ ವಹಿಸಿದ್ದು, ಸಚಿವರು ಸಭೆ ನಡೆಸಿದ್ದು, ಸಭೆಯಲ್ಲಿ ಲಾಕ್‍ಡೌನ್ ಮಾಡಬೇಕೆಂಬ ಸಲಹೆ ಕೇಳಿಬಂದಿದೆ.

ಆರ್ಥಿಕ ಚಟುವಟಿಕೆಗಳಿಗಿಂತ ಮನುಷ್ಯನ ಜೀವ ಮುಖ್ಯವಾಗಿದ್ದು, ಯಾವ ರೀತಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin