ವೀಕೆಂಡ್ ಮಸ್ತಿಗೆ ‘ಕರ್ನಾಟಕ ಬಂದ್’ ಅಡ್ಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ವಾರಾಂತ್ಯಕ್ಕೆಂದು ಪ್ರವಾಸ ಹೋಗುವವರೆ ಎಚ್ಚರ..! ಡಿ.5ರಂದು ರಾಜ್ಯ ಬಂದ್‍ಗೆ ಕರೆ ಕೊಡಲಾಗಿದೆ.  ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು 5ರಂದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್‍ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಜನಜೀವನ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ವೀಕೆಂಡ್ ಪ್ರವಾಸ ಹೋಗುವವರು, ಊರುಗಳಿಗೆ ತೆರಳುವವರು ಎಚ್ಚರ ವಹಿಸುವುದು ಸೂಕ್ತ.

ಬೆಂಗಳೂರಿನಲ್ಲಿ ಅಂದು ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಸ್ವಾಭಿಮಾನಿ ಕನ್ನಡಿಗರ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಕರ್ನಾಟಕ ರಕ್ಷಣಾ ವೇದಿಕೆ, ಪ್ರವೀಣ್‍ಶೆಟ್ಟಿ ಬಣ, ಗಡಿ ಬಂದ್, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಮುಂದಾಗಿದೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಹಮ್ಮಿಕೊಂಡಿರುವುದರ ಜತೆಗೆ ರಸ್ತೆ ತಡೆ, ರೈಲು ತಡೆ ನಡೆಸಲು ನಿರ್ಧರಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.  ಕನ್ನಡ ಒಕ್ಕೂಟದ ಮುಖಂಡರು, ಕಾರ್ಯಕರ್ತರು, ರಾಜ್ಯಾದ್ಯಂತ ಇರುವ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೆರವಣಿಗೆ, ಬಸ್ ತಡೆ, ರಸ್ತೆ ತಡೆ ಮಾಡಲು ಮುಂದಾಗಿವೆ.

ಆಟೋ, ಟ್ಯಾಕ್ಸಿ, ಓಲಾ, ಊಬರ್‍ಗಳವರು ಪ್ರತಿಭಟನೆಗೆ ಬೆಂಬಲ ನೀಡಿ ಓಡಾಟ ನಿಲ್ಲಿಸುವುದಾಗಿ ಹೇಳಿರುವುದರಿಂದ ಅಂದು ಯಾವುದೇ ಟ್ಯಾಕ್ಸಿ, ಆಟೋಗಳು ಸಿಗುವುದಿಲ್ಲ. ಬಸ್‍ಗಳು ಸಂಚಾರ ನಿಲ್ಲಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಬಸ್‍ಗಳನ್ನು ತಡೆಯುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಹೊಟೇಲ್ ಮಾಲೀಕರು ನಾವು ಬಂದ್‍ಗೆ ಬೆಂಬಲಿಸುವುದಿಲ್ಲ. ಈಗಾಗಲೇ ಲಾಕ್‍ಡೌನ್‍ನಿಂದ ವ್ಯಾಪಾರವಿಲ್ಲದೆ ಹೈರಾಣಾಗಿದ್ದೇವೆ. ಈಗ ಮತ್ತೆ ಬಂದ್ ಮಾಡಿದರೆ ಸಾಕಷ್ಟು ನಷ್ಟಕ್ಕೀಡಾಗುತ್ತೇವೆ. ಹೀಗಾಗಿ ಕನ್ನಡಪರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೇವೆ, ಹೊಟೇಲ್‍ಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೆ ಟಾಂಗ್ ಕೊಟ್ಟಿರುವ ಕನ್ನಡಪರ ಹೋರಾಟಗಾರರು ಮನೆಯಿಂದ ಜನ ಹೊರಬಂದರಲ್ಲವೆ ನಿಮ್ಮ ಹೊಟೇಲ್‍ಗಳು ನಡೆಯುವುದು ಎಂದು ಹೇಳಿದ್ದಾರೆ. ಮಾಲ್‍ಗಳು, ಚಿತ್ರಮಂದಿರಗಳು, ಫುಟ್‍ಪಾತ್ ವ್ಯಾಪಾರಿಗಳು ಪರಿಸ್ಥಿತಿ ನೋಡಿಕೊಂಡು ಪ್ರತಿಭಟನೆಗೆ ಸಹಕಾರ ನೀಡುವುದಾಗಿ ಹೇಳಿವೆ. ಬಂದ್ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.

Facebook Comments