ವೇಗಿಗಳ ದಾಳಿಗೆ ವಿಂಡೀಸ್ ತತ್ತರ, ಕೊಹ್ಲಿ ಪಡೆಗೆ 2-0 ಸರಣಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

ಕಿಂಗ್‍ಸ್ಟನ್, ಸೆ.3- ವೆಸ್ಟ್‍ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್‍ನಲ್ಲಿ 257 ರನ್‍ಗಳಿಂದ ಅಮೋಘ ಗೆಲುವು ಗಳಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ನಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಕಿಂಗ್ಸ್‍ಗಳಂತೆ ಮೆರೆಯುತ್ತಿದೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಬೇಕೆಂಬ ಕೊಹ್ಲಿ ಕನಸಿಗೆ ಬ್ಯಾಟ್ಸ್‍ಮನ್‍ಗಳು ಹಾಗೂ ಬೌಲರ್‍ಗಳು ಬೆಂಬಲ ನೀಡಿದ್ದರಿಂದ 2 ಪಂದ್ಯಗಳನ್ನೂ ಗೆಲ್ಲುವ ಮೂಲಕ 120 ಅಂಕಗಳನ್ನು ಗಳಿಸುವ ಮೂಲಕ ನಂಬರ್ 1 ಸ್ಥಾನದಲ್ಲಿದೆ.

ಏಕದಿನ ವಿಶ್ವಕಪ್‍ನಲ್ಲಿ ವಿಂಡೀಸ್ ಮೂಲಕ ಗೆಲುವಿನ ಚೈತ್ರ ಯಾತ್ರೆ ಆರಂಭಿಸಿದ ವಿರಾಟ್ ಪಡೆ ಕೆರಿಬಿಯನ್ ನಾಡಿನಲ್ಲಿ ನಡೆದ ಏಕದಿನ ಹಾಗೂ ಚುಟುಕು ಕ್ರಿಕೆಟ್‍ನಲ್ಲಿ ಕ್ಲೀನ್ ಸ್ವೀಪ್ ಮಾಡಿದ ನಂತರ ಈಗ ಟೆಸ್ಟ್‍ನಲ್ಲೂ 2-0 ಗೆಲ್ಲುವ ಮೂಲಕ ವಿಂಡೀಸ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ.

ಭಾರತ ನೀಡಿದ 467 ಗೆಲುವಿನ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 4ನೆ ದಿನದಾಟದ ಆರಂಭದಲ್ಲೇ ಆಕ್ರಮಣಕಾರಿ ಆಡುತ್ತಿದ್ದ ಡೇರೆನ್ ಬ್ರಾಮೋ (23 ರನ್, 4 ಬೌಂಡರಿ) ಅವರು ಗಾಯಗೊಂಡು ಮೈದಾನ ತೊರೆಯುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.

ಬ್ರೂಕ್ಸ್ ಚೊಚ್ಚಲ ಅರ್ಧಶತಕ:
ಎರಡನೇ ಟೆಸ್ಟ್‍ನ ಮೊದಲ ಇನ್ನಿಂಗ್ಸ್‍ನಲ್ಲಿ ಶೂನ್ಯಸುತ್ತಿದ ವಿಂಡೀಸ್‍ನ ಯುವ ಆಟಗಾರ ಬ್ರೂಕ್ ಎರಡನೇ ಇನ್ನಿಂಗ್ಸ್‍ನಲ್ಲಿ ಭಾರತದ ವೇಗಿ ಹಾಗೂ ಸ್ಪಿನ್ ಬೌಲಿಂಗ್‍ಅನ್ನು ಸಮರ್ಥವಾಗಿ ಎದುರಿಸುವ ಮೂಲಕ ಟೆಸ್ಟ್‍ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ (50 ರನ್, 9 ಬೌಂಡರಿ) ಗಳಿಸಿ ಅಪಾಯಕಾರಿಯಾಗುತ್ತಿದ್ದಂತೆ ಇಲ್ಲದ ರನ್ ಅನ್ನು ಕದಿಯಲು ಹೋಗಿ ವಿರಾಟ್ ಕೊಹ್ಲಿ ಮಾಡಿದ ಚುರುಕಿನ ಪೀಲ್ಡಿಂಗ್‍ನಿಂದ ರನೌಟ್ ಆದರು.

ನಂತರ ಬಂದ ಬ್ಲಾಕ್ ವುಡ್ (38 ರನ್, 4 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಜಸೀನ್ ಹೋಲ್ಡರ್ (39 ರನ್, 9 ಬೌಂಡರಿ) ಹೋರಾಟ ತೋರಿದರೂ ಭಾರತದ ಬೌಲಿಂಗ್‍ಗೆ ನಲುಗಿ 210ಕ್ಕೆ ಸರ್ವಪತನ ಕಾಣುವ ಮೂಲಕ 257 ರನ್‍ಗಳಿಂದ ಸೋಲು ಕಂಡಿತು.

ಭಾರತದ ಪರ ಮೊಹಮ್ಮದ್ ಶಮಿ, ರವೀಂದ್ರಾ ಜಡೇಜಾ 3 ವಿಕೆಟ್, ಇಶಾಂತ್ ಶರ್ಮಾ 2 ಹಾಗೂ ಬೂಮ್ರಾ 1 ವಿಕೆಟ್ ಕಬಳಿಸಿದರು. ಚೊಚ್ಚಲ ಶತಕ ಗಳಿಸಿದ ಹನುಮ ವಿಹಾರಿ ಪಂದ್ಯಶ್ರೇಷ್ಠರಾದರು.

ಸಂಕ್ಷಿಪ್ತ ಸ್ಕೋರ್:
ಭಾರತ:416 ಹಾಗೂ 168/4 ಡಿಕ್ಲೇರ್ಡ್
ವಿಂಡೀಸ್:117 ಹಾಗೂ 210

#ಧೋನಿ ದಾಖಲೆ ಮುರಿದ ಪಂತ್
ನವದೆಹಲಿ, ಸೆ.3- ಟೀಂ ಇಂಡಿಯಾ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಮುರಿದಿದ್ದಾರೆ.
ವೆಸ್ಟ್‍ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‍ನಲ್ಲಿ ಬಾರ್ತ್‍ವೇಟ್‍ರ ವಿಕೆಟ್ ಅನ್ನು ಕ್ಯಾಚ್ ಪಡೆಯುವ ಮೂಲಕ 11 ಪಂದ್ಯಗಳಲ್ಲಿ 50 ಕ್ಯಾಚ್ ಹಿಡಿದ ಕೀಪರ್ ಆಗಿ ಹೊರಹೊಮ್ಮಿದ್ದಾರೆ, ಧೋನಿ 15 ಪಂದ್ಯಗಳನ್ನಾಡಿದ್ದರು.

ಕಡಿಮೆ ಪಂದ್ಯಗಳಲ್ಲಿ ಹೆಚ್ಚು ಬ್ಯಾಟ್ಸ್‍ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಸಾಲಿನಲ್ಲಿ ದಕ್ಷಿಣ ಆಪ್ರಿಕಾದ ಮಾರ್ಕ್ ಬೌಚರ್, ಇಂಗ್ಲೆಂಡ್‍ನ ಜೋಸ್‍ಬಟ್ಲರ್, ಆಸ್ಟ್ರೇಲಿಯಾ ಟಿಮ್ ಪೈನ್ ನಂ.1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ ಹಾಗೂ ಭಾರತದ ರಿಷಭ್ ಪಂತ್ 2ನೇ ಸ್ಥಾನದಲ್ಲಿದ್ದಾರೆ.

Facebook Comments