ಕೊರೋನಾ ಕುರಿತು ವಾಟ್ಸಪ್ ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವನು ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಮಾ.21- ಇಂಡೋನೇಷ್ಯಾ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ದಂಪತಿಗೆ ಕೊರೋನಾ ಸೋಂಕು ಇದೆ ಎಂದು ವಾಟ್ಸಪ್ ಗ್ರೂಪ್‍ನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.  ಗುಂಡಪ್ಪ ಬೀದಿಯ ಅಭಿಜಿತ್(29) ಬಂಧಿತ ಆರೋಪಿ.

ಅಂಜನ್ ಎಂಬುವರು ಪತ್ನಿ ಭವಾನಿ ಅವರೊಂದಿಗೆ ಇಂಡೋನೇಷ್ಯಾ ಪ್ರವಾಸ ಮುಗಿಸಿ ಮಾ.7ರಂದು ಭಾರತಕ್ಕೆ ಹಿಂದಿರುಗಿದ್ದು, ತಮ್ಮ ಪ್ರವಾಸದ ವಿವರಗಳನ್ನು ಅಗ್ರಹಾರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಮೂದಿಸಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ್ದು, ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.  ಆದರೂ ಸಹ ಅಂಜನ್ ಮತ್ತು ಭವಾನಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ವಾಟ್ಸಪ್ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ಈ ಸಂಬಂಧ ಹೆಚ್ಚು ಫೋನ್ ಕಾಲ್‍ಗಳು ಬಂದಿವೆ.

ಫೋನ್ ಕರೆಗಳಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಸುಳ್ಳು ಹಬ್ಬಿಸಿ ಕುಟುಂಬಕ್ಕೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ತುಮಕೂರು ನಗರ ಪೊಲೀಸ್ ಠಾಣೆಯ ಪಿಎಸ್‍ಐ ವಿಜಯಲಕ್ಷ್ಮಿ.ಎಸ್ ಹಾಗೂ ಸಿಬ್ಬಂಧಿಗಳ ತಂಡವು ಆರೋಪಿ ಅಭಿಜಿತ್‍ನನ್ನು ಬಂಧಿಸಿ ಕಾನೂನು ರೀತಿ ಕ್ರಮಕೈಗೊಂಡಿದ್ದಾರೆ.

ಸಾರ್ವಜನಿಕರಿಗೆ ವಿಶೇಷ ಸೂಚನೆ: ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಹರಡುತ್ತಿದ್ದು, ಈ ಸಂಬಂಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾರಕ ವೈರಸ್ ಬಗ್ಗೆ ಅನಗತ್ಯ ಯಾರೊದ್ದೋ ಹೆಸರು ಮತ್ತು ವಿಳಾಸವನ್ನು ನಮೂದಿಸಿ ಈ ಮಾರಕ ರೋಗ ಬಂದೇ ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.

ಇಂತಹ ಸುಳ್ಳು ಸುದ್ದಿಗಳನ್ನು ಶೇರ್ ಮಾಡುತ್ತಿರುವ ವಿಚಾರವು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತುರವಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು.

ಇಂತಹ ಸುಳ್ಳು ಸುದ್ದಿ ಹಾಗೂ ವದಂತಿಗಿಂದ ಜನಸಾಮಾನ್ಯರು ಸಹ ಆತಂಕಕ್ಕೊಳಗಾಗುತ್ತಿದ್ದಾರೆ. ಸಾಧ್ಯವಾದಷ್ಟು ಇಂತಹ ಸುಳ್ಳು ಸುದ್ದಿ ಹಾಗೂ ವದಂತಿಗಳಿಗೆ ಕಿವಿಗೊಡದೆ ಸರ್ಕಾರದ ಅಧಿಕೃತ ಮಾಹಿತಿ ಜಾಲತಾಣಗಳಲ್ಲಿ ಖಚಿತಪಡಿಸಿಕೊಳ್ಳಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷರಾದ ಡಾ.ಕೆ.ವಂಶಿಕೃಷ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Facebook Comments