1ಕಿ.ಮೀ. ರಸ್ತೆ ವೈಟ್‍ಟಾಪಿಂಗ್‍ಗೆ 35 ಕೋಟಿ : ಎನ್.ಆರ್.ರಮೇಶ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.30- ಕೆಟಿಪಿಪಿ ಕಾಯ್ದೆ ಅನುಸಾರ ಟೆಂಡರ್ ಕರೆಯದೆ ನಿಯಮಬಾಹಿರವಾಗಿ ವೈಟ್ ಟಾಪಿಂಗ್ ಕಾಮಗಾರಿ ಗುತ್ತಿಗೆ ನೀಡಲು ಮುಂದಾಗಿರುವ ಕ್ರಮದಿಂದ ಈ ಕೂಡಲೆ ಹಿಂದೆ ಸರಿದು ಕಾನೂನು ಬದ್ಧವಾಗಿ ಟೆಂಡರ್ ಕರೆಯಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ರಸ್ತೆಯಿಂದ ಉಲ್ಲಾಳು ರಸ್ತೆಯ ಜಂಕ್ಷನ್‍ವರೆಗಿನ ಬೆಂಗಳೂರು ವಿವಿ ಆವರಣದ 1.03 ಕಿ.ಮೀ ಉದ್ದದ್ದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು 35.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಿಬಿಎಂಪಿಯ ನಿರ್ಧಾರ ಕಾನೂನುಬಾಹಿರವಾಗಿದೆ. ಅದರಲ್ಲೂ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿ ಟೆಂಡರ್ ಆಹ್ವಾನಿಸದೆ ಕಾಮಗಾರಿ ಗುತ್ತಿಗೆ ನೀಡಲು ಹೊರಟಿರುವುದು ಸೂಕ್ತವಾದ ಕ್ರಮವಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.

ಈಗಿನ ಕಚ್ಚಾ ವಸ್ತುಗಳ ಬೆಲೆ ಅನ್ವಯ 21 ರಿಂದ 24 ಮೀಟರ್ ಆಗಲದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಸುಮಾರು 10 ಕೋಟಿ ರೂ.ವೆಚ್ಚವಾಗುತ್ತದೆ. ಇಂತಹ ಸಂದರ್ಭದಲ್ಲಿ 1.03 ಕಿ.ಮೀ. ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು 35 ಕೋಟಿ ನೀಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ತೆರಿಗೆದಾರರ ತೆರಿಗೆ ಹಣವನ್ನು ಈ ರೀತಿ ದುಂದು ವೆಚ್ಚ ಮಾಡುವುದು ಸರಿಯಲ್ಲ. ಅದರಲ್ಲೂ ಒಂದು ಲಕ್ಷಕ್ಕೆ ಮೇಲ್ಪಟ್ಟ ಕಾಮಗಾರಿಗಳನ್ನು ಟೆಂಡರ್ ಕರೆಯಲೇಬೇಕು ಎಂಬ ನಿಯಮವಿದೆ.ಆದರೆ, ಕೆಲ ಅಧಿಕಾರಿಗಳು ಬೇರೆ ಕಾಮಗಾರಿಯ ಉಳಿಕೆ ಹಣದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗೆ ಟೆಂಡರ್ ಕರೆಯುವ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಹೀಗಾಗಿ ಈ ಕೂಡಲೇ ನಿಯಮಬಾಹಿರವಾಗಿ ನೀಡಲಾಗಿರುವ ಕಾಮಗಾರಿಯನ್ನು ತಡೆಹಿಡಿದು ಟೆಂಡರ್ ಕರೆದು ಗುತ್ತಿಗೆ ನೀಡಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ. ಒಂದು ಕಿ.ಮೀ. ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು 35 ಕೋಟಿ ರೂ. ಮಂಜೂರು ಮಾಡಿರುವ ಬಿಬಿಎಂಪಿ ಧೋರಣೆ ವಿರುದ್ಧ ಪ್ರತಿಪಕ್ಷಗಳ ಮುಖಂಡರು ಹರಿಹಾಯ್ದಿದ್ದರು.

ಇದೀಗ ಬಿಜೆಪಿ ಪಕ್ಷದ ಮುಖಂಡರಾಗಿರುವ ಎನ್.ಆರ್.ರಮೇಶ್ ಅವರ ಈ ಹೇಳಿಕೆಯಿಂದ ಪ್ರತಿಪಕ್ಷಗಳ ಮಾತಿಗೆ ಮನ್ನಣೆ ಸಿಕ್ಕಂತಾಗಿದೆ.

Facebook Comments