WHO ಮಾರ್ಗಸೂಚಿ ನೀಡುವವರೆಗೂ ಯಾವುದೇ ನಿರ್ಬಂಧ ಇಲ್ಲ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.30- ವಿಶ್ವ ಆರೋಗ್ಯ ಸಂಸ್ಥೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವವರೆಗೂ ಓಮಿಕ್ರಾನ್ ಸೋಂಕು ಹಬ್ಬದಂತೆ ಕಡಿವಾಣ ಹಾಕುವ ಕುರಿತು ಯಾವುದೇ ಚಟುವಟಿಕೆಗಳಿಗೂ ನಿಬಂಧನೆ ಹಾಕುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಡಿ.1 ಅಥವಾ 2ರಂದು ವಿಶ್ವ ಆರೋಗ್ಯ ಸಂಸ್ಥೆ ಹೊಸ ತಳಿಯ ಸೋಂಕಿಗೆ ಕಡಿವಾಣ ಹಾಕುವ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು. ತದನಂತರ ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾಹಿತಿ ನೀಡಲಿದೆ. ಅಲ್ಲಿಯವರೆಗೂ ಯಾವುದೇ ಚಟುವಟಿಕೆಗಳಿಗೂ ಸರ್ಕಾರ ನಿಬಂಧನೆ ವಿಧಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಲಾಕ್‍ಡೌನ್ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಅಂತಹ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು.

ಶಾಲಾಕಾಲೇಜುಗಳನ್ನು ಮುಚ್ಚುತ್ತೇವೆ ಎಂಬ ಸುದ್ದಿಯಲ್ಲೂ ಹುರುಳಿಲ್ಲ. ಈ ಬಗ್ಗೆ ಸ್ವತಃ ಸಿಎಂ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಗಮನಕೊಡಬಾರದು. ಸರ್ಕಾರದ ಅಧಿಕೃತ ಆದೇಶ ಹೊರಬೀಳುವವರೆಗೂ ಧೈರ್ಯದಿಂದಿರಿ ಎಂದು ಹೇಳಿದರು. ತಾಂತ್ರಿಕ ಸಲಹಾ ಸಮಿತಿಯ ಯಾವೆಲ್ಲ ಸಲಹೆ ಸೂಚನೆಗಳನ್ನು ಕೊಡುತ್ತದೆಯೋ ಸರ್ಕಾರ ಅದನ್ನು ಪಾಲನೆ ಮಾಡುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಅಗತ್ಯಬಿದ್ದರೆ ಲಾಕ್‍ಡೌನ್ ಮಾಡಲಾಗುವುದೆಂಬ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಈ ಬಗ್ಗೆ ಸಿಎಂ ಅವರೇ ಹೇಳಿದ್ದಾರೆ. ಸರ್ಕಾರದ ಮುಂದೆ ಲಾಕ್‍ಡೌ£ ಮಾಡುವಂತಹ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ಐಸಿಎಂಆರ್ ಅಧಿಕೃತವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಆಯಾ ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡುತ್ತದೆ. ನಾವು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿದ ಮೇಲೆ ಕರ್ನಾಟಕ ಸರ್ಕಾರವೇ ಮಾರ್ಗಸೂಚಿಯನ್ನು ಜಾರಿಗೆ ತರಲಿದೆ ಎಂದರು.

ಸರ್ಕಾರ ಈಗಾಗಲೇ ತಂದಿರುವ ಮಾರ್ಗಸೂಚಿಗಳ ಜೊತೆಗೆ ಇವುಗಳನ್ನು ಬದಲಾಯಿಸಿ ಹೊಸ ಸೋಂಕು ಹಬ್ಬದಂತೆ ಯಾವೆಲ್ಲ ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಅವರ ಜೊತೆ ಚರ್ಚಿಸಿ ಅಗತ್ಯ ಕಂಡುಬಂದರೆ ಇನ್ನಷ್ಟು ಮಾರ್ಗಸೂಚಿಗಳನ್ನು ಜಾರಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಗಡಿ ಭಾಗಗಳಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳುವುದು, ಕ್ವಾರಂಟೈನ್ ನಿಯಮ, ನೆಗೆಟಿವ್ ಬಂದರೆ ಏನು ಮಾಡಬೇಕು, ಸಾಂಸ್ಥಿಕ ಕ್ವಾರಂಟೈನ್, ಬೇರೆ ಬೇರೆ ದೇಶದಲ್ಲಿ ಹೊಸ ತಳಿ ಬಗ್ಗೆ ಆಗಿರುವ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದೇವೆ. ಈ ಎಲ್ಲ ಸಾಧಕಬಾಧಕಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ವಿಮಾನ ನಿಲ್ದಾಣವಲ್ಲದೆ ಗಡಿಭಾಗಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು, ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ವಿಧಾನ, ಮನೆಯಲ್ಲಿ ಕ್ವಾರಂಟೈನ್ ಮಾಡಬಹುದೇ? ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾದರೂ ಆತಂಕಪಡುವ ಅಗತ್ಯವಿಲ್ಲ. ನಮ್ಮ ಮುಂದೆ ಹೊಸತಳಿಯ ಓಮಿಕ್ರಾನ್ ತಡೆಯುವುದು ಮುಖ್ಯ ಉದ್ದೇಶವಾಗಿದೆ. ಇದರ ತೀವ್ರತೆ ನಮಗೆ ಬಹಳ ಮುಖ್ಯವಾಗಿದೆ ಎಂದರು.

ಈವರೆಗೂ 18 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಹೊಸ ಪ್ರಬೇಧ ತೀವ್ರವಾದರೆ ಮಾತ್ರವೇ ಕ್ರಮ ತೆಗೆದುಕೊಳ್ಳುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆ ಅಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಅವರ ಜಿನೊಮಿಕ್ ಸಿಕ್ವೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗದ ಲಕ್ಷಣಗಳು ಗಂಭೀರವಾಗಿಲ್ಲ. ಎರಡುಮೂರು ದಿನದಲ್ಲಿ ವರದಿ ಬರಲಿದೆ ಎಂದು ಹೇಳಿದರು. ಇಬ್ಬರಲ್ಲಿ ಒಬ್ಬರಿಗೆ ಡೆಲ್ಟಾಗಿಂತ ಭಿನ್ನವಾದ ಲಕ್ಷಣ ಕಂಡುಬಂದಿದೆ. ಅದು ಯಾವ ತಳಿ ಎಂದು ಗೊತ್ತಾಗಿಲ್ಲ. ವರದಿ ಬಂದ ಬಳಿಕ ಎಲ್ಲವೂ ತಿಳಿಯುತ್ತದೆ. ಅಲ್ಲಿಯವರೆಗೂ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.

ಬೋಸ್ಟಾನ್ ಡೋಸ್ ನೀಡುವ ವಿಚಾರವಾಗಿ ರಾಜ್ಯ ಸರ್ಕಾರ ತೀರ್ಮಾನ ಮಾಡಲು ಸಾಧ್ಯವಿಲ್ಲ. ಇದನ್ನು ಕೇಂದ್ರ ಸರ್ಕಾರ ಮತ್ತು ಐಸಿಎಂಆರ್ ತೀರ್ಮಾನ ಮಾಡಬೇಕು. ರಾಜ್ಯ ಸರ್ಕಾರ ತೀರ್ಮಾನಿಶಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

Facebook Comments