ಭಾರತದಲ್ಲಿ WHO ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ : ಪ್ರಧಾನಿ ಮೋದಿ ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.13- ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಕೇಂದ್ರವನ್ನು ಸ್ಥಾಪಿಸಲು ಸಮ್ಮತಿಸಿದೆ.  ಆಯುರ್ವೇದ ದಿನಾಚರಣೆ ಸಂದರ್ಭದಲ್ಲೇ ಡಬ್ಲ್ಯೂಎಚ್‍ಒ ನೀಡಿರುವ ಈ ಘೋಷಣೆ ಭಾರತೀಯರು ಹೆಮ್ಮೆ ಪಡುವಂತಾಗಿದೆ.

ಧನ್ವಂತರಿ ಜಯಂತಿ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ರಾಜಸ್ತಾನದಲ್ಲಿ ಎರಡು ಅತ್ಯಾಧುನಿಕ ಆಯುರ್ವೇದ ಕೇಂದ್ರಗಳನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ವಿಡಿಯೋ ಸಂದೇಶ ನೀಡಿ ಭಾರತದಲ್ಲಿ ಡಬ್ಲ್ಯೂಎಚ್‍ಒ ಸಾಂಪ್ರದಾಯಿಕ ಔಷಧಗಳ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಿದರು.  ಈ ಘೋಷಣೆ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಈ ಕೇಂದ್ರವು ಜಾಗತಿಕ ಸೌಖ್ಯತೆಗೆ ಅತ್ಯಂತ ಸದೃಢ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್ ಮತ್ತು ರಾಜಸ್ತಾನದಲ್ಲಿ ಉದ್ಘಾಟನೆಯಾಗಿರುವ ಎರಡು ಆಯುರ್ವೇದ ಕೇಂದ್ರಗಳು 21ನೆ ಶತಮಾನದಲ್ಲಿ ಆಯುರ್ವೇದದ ಬೆಳವಣಿಗೆ ಮತ್ತು ಪ್ರಗತಿಗೆ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದು ಮೋದಿ ಬಣ್ಣಿಸಿದರು. ಗುಜರಾತ್‍ನ ಜಾಮ್ ನಗರದಲ್ಲಿ ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಕೇಂದ್ರ (ಐಟಿಆರ್‍ಎ) ಮತ್ತು ರಾಜಸ್ತಾನದ ಜೈಪುರ್‍ನಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್‍ಐಎ)ಗೆ ಮೋದಿ ಚಾಲನೆ ನೀಡಿದರು.

ಇವೆರಡೂ ದೇಶದ ಅಗ್ರಮಾನ್ಯ ಆಯುರ್ವೇದ ಸಂಸ್ಥೆಗಳಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಚೀನ ಆಯುರ್ವೇದ ಪದ್ಧತಿಯನ್ನು ಮತ್ತಷ್ಟು ಲೋಕಪ್ರಿಯಗೊಳಿಸಲು ನೆರವಾಗಲಿದೆ.

ಆಯುರ್ವೇದ ಜಯಂತಿಯ ಶುಭಾಶಯ: ಇಂದು ದೇಶಾದ್ಯಂತ 5ನೆ ವಾರ್ಷಿಕ ಆಯುರ್ವೇದ ದಿನಾಚರಣೆಯನ್ನು ಮಹಾವೈದ್ಯ ಧನ್ವಂತರಿ ಅವರ ಜಯಂತಿಯನ್ನು 2006ರಿಂದ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಆಯುರ್ವೇದ ಮತ್ತು ಭಾರತದ ಪ್ರಾಚೀನ ಔಷಧೀಯ ಪದ್ಧತಿಗಳ ಮಹತ್ವವನ್ನು ಪುನರುಚ್ಚರಿಸಿದ್ದಾರೆ.

Facebook Comments