ರಾಜ್ಯಪಾಲರ ಬಳಿ ಸಿಎಂ ವಿರುದ್ಧ ದೂರು ನೀಡಲು ಹೋಗಿರಲಿಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರ ಬಳಿ ದೂರು ನೀಡಲು ಹೋಗಿರಲಿಲ್ಲ. ಇಲಾಖೆಗೆ ಸಂಬಂಸಿದಂತೆ ಕೆಲವು ಸ್ಪಷ್ಟನೆ ಕೇಳಲು ಹೋಗಿದ್ದೆ ಎಂದು ಹೇಳುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈಗಲೂ ನಮ್ಮ ನಾಯಕರು. ಅವರು ನನ್ನ ಮುಖ್ಯಮಂತ್ರಿ. ನಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್.ವಾಲಾ ಅವರ ಬಳಿ ಸ್ಪಷ್ಟನೆ ಕೇಳಲು ಹೋಗಿದ್ದೆ ಹೊರತು ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ಇವೆಲ್ಲವೂ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಗುಜರಾತ್‍ನಲ್ಲಿ 18 ವರ್ಷ ಕಾಲ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಸ್ನೆಸ್ ಟ್ರಾನ್ಸಾಕ್ಷನ್ ಆ್ಯಕ್ಟ್ ಪ್ರಕಾರ ಯಾವುದೇ ಇಲಾಖೆಗೆ ನಿಗದಿಪಡಿಸಿದ ಅನುದಾನವನ್ನು ಆಯಾ ಸಚಿವರೇ ಬಳಸಬೇಕೆಂಬ ನಿಯಮವಿದೆ. ಇದಕ್ಕೆ ಸಂಬಂಸಿದಂತೆ ನಾನು ಸ್ಪಷ್ಟನೆ ಕೇಳಿದ್ದೆ ಹೊರತು ಉಳಿದಂತೆ ಯಾವ ದೂರನ್ನು ನೀಡಿಲ್ಲ ಎಂದು ಪುನರುಚ್ಚರಿಸಿದರು.

ಪಕ್ಷದ ರಾಜ್ಯಾಧ್ಯಕ್ಷರು ರಾಜ್ಯ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಪತ್ರ ಬರೆದಿದ್ದೆ. ನಮ್ಮ ಪಕ್ಷದವರ ಬಳಿ ದೂರು ಕೊಡುವ ಬದಲು ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ಬಳಿ ಕೊಡಬೇಕಿತ್ತೇ ಎಂದು ಖಾರವಾಗಿ ಪ್ರಶ್ನಿಸಿದರು.

ನಾನು ಮುಂದೆಯೂ ಯಡಿಯೂರಪ್ಪನವರ ಬಗ್ಗೆ ದೂರು ಕೊಡುವುದಿಲ್ಲ. ಏನೇ ಇದ್ದರೂ ಪಕ್ಷದ ನಾಯಕರ ಗಮನಕ್ಕೆ ತಂದೇ ಕೆಲಸ ಮಾಡುತ್ತೇನೆ. ಎಂದಿಗೂ ಕೂಡ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ. ಅಮಿತ್ ಷಾ, ಸಿ.ಟಿ.ರವಿ, ಅರುಣ್ ಸಿಂಗ್ ಎಲ್ಲರೂ ನಮ್ಮ ಕುಟುಂಬದ ಸದಸ್ಯರೇ. ಇಲಾಖೆ ಬಗ್ಗೆ ಅವರ ಬಳಿ ಹೇಳಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.
ನನ್ನ ಜೀವನದಲ್ಲಿ ನಾನು ಎಂದಿಗೂ ಸ್ಪೋಟಗೊಳ್ಳುವುದಿಲ್ಲ. ನಾನು ಸತ್ಯ ಕಂಡಾಗ ಮುನ್ನುಗ್ಗುವೆ. ಕುತ್ತಿಗೆ ಕೂಯ್ದರೂ ಕೂಡ ನಾನು ದಾರಿ ತಪ್ಪುವವನಲ್ಲ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬುದು ಕೇವಲ ಭ್ರಮೆ ಅಷ್ಟೆ. ಯಡಿಯೂರಪ್ಪನವರೇ ಅಕಾರದಲ್ಲಿ ಮುಂದುವರೆಯುತ್ತಾರೆ. ಶಾಸಕ ಯತ್ನಾಳ್ ಸುಖಾಸುಮ್ಮನೆ ಹಾದಿಬೀದಿಯಲ್ಲಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಒಂದುವೇಳೆ ನಿಮ್ಮ ಬಳಿ ಯಾವುದಾದರೂ ದಾಖಲೆಗಳಿದ್ದರೆ ಸಂಬಂಧಪಟ್ಟವರಿಗೆ ಕೊಟ್ಟು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಈಗಲೂ ಕೂಡ ನಾನು ಹೇಳುವುದೇನೆಂದರೆ ಯತ್ನಾಳ್ ಏನೆ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲೇ ಮಾತನಾಡಬೇಕು. ಅವರು ಯಾರ ಬಗ್ಗೆ ಟೀಕೆ ಮಾಡಿದರೂ ಅದಕ್ಕೆ ದಾಖಲೆಗಳಿರಬೇಕು. ಅದನ್ನು ಬಿಟ್ಟು ಏನೇನೋ ಮಾತನಾಡುವುದರಲ್ಲಿ ಅರ್ಥವಿಲ್ಲ. ಈಗಲೂ ಕೂಡ ಬಿಎಸ್‍ವೈ ಅವರೇ ನಮ್ಮ ನಾಯಕರು. ಅವರು ಅಕಾರದಲ್ಲಿ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದ್ದು, ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂದರು.

# ಸಿದ್ದರಾಮಯ್ಯನವರಿಗೆ ತಿರುಗೇಟು:
ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬಗ್ಗೆ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಸುಳ್ಳು ಹೇಳುವುದರಲ್ಲಿ, ಕಥೆ ಕಟ್ಟುವುದರಲ್ಲಿ ಅವರಿಗೆ ನೋಬೆಲ್ ಇಲ್ಲವೇ ಜ್ಞಾನಪೀಠ ಪ್ರಶಸ್ತಿ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರಿಗೆ ಮಾಡಲು ಏನೇನೂ ಕೆಲಸವಿಲ್ಲ. ಹೀಗಾಗಿ ಏನೇನೊ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸರ್ಕಾರದಲ್ಲಿ ಈಶ್ವರಪ್ಪನವರ ಮಾತು ಏನೂ ನಡೆಯುವುದಿಲ್ಲ. ತಾನಾಗಿದ್ದರೆ ಒಂದೇ ಒಂದು ಕ್ಷಣವೂ ಅಕಾರದಲ್ಲಿ ಮುಂದುವರೆಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಾಗಾದರೆ ಮೈಸೂರಿನಲ್ಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡುವಾಗ ನಿಮ್ಮನ್ನು ಕೇಳಿಯೇ ಮಾಡಿದ್ದರೇ? ನನ್ನನ್ನು ಕೇಳದೆ ಮಾಡಿಲ್ಲ ಎಂದು ಮುನಿಸಿಕೊಂಡು ನಾಲ್ಕು ದಿನ ರೆಸಾರ್ಟ್‍ನಲ್ಲಿ ಉಳಿದಿದ್ದಿರಿ. ಮೊದಲು ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆತ್ಮಗೌರವ ಉಳಿಸಿಕೊಳ್ಳಿ ಎಂದು ಛಾಟಿ ಬೀಸಿದರು.

ರಮೇಶ್‍ಕುಮಾರ್ ಅವರೇ ಹೇಳಿರುವಂತೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡುವಾಗ ಸಿದ್ದರಾಮಯ್ಯನವರನ್ನು ಕೇಳದೆ ಮಾಡಲಾಗಿದೆ ಎಂದಿದ್ದಾರೆ. ಹಾಗಾದರೆ ನಿಮಗೆ ಸ್ವಾಭಿಮಾನವಿಲ್ಲವೇ? ಎಂದು ಪ್ರಶ್ನಿಸಿದರು. ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ಅವರು ತುಂಬ ಅನುಭವಿಗಳು. ವಿರೋಧಪಕ್ಷದ ಸ್ಥಾನವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದೀರಿ. ಮೊದಲು ಕಾಂಗ್ರೆಸ್‍ನಲ್ಲಿ ಹುಟ್ಟುಕೊಂಡಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ಆಮೇಲೆ ಬೇರೆಯವರಿಗೆ ನೈತಿಕ ಪಾಠ ಮಾಡಿ ಎಂದು ಹೇಳಿದರು.

Facebook Comments

Sri Raghav

Admin